Hosanagara: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರಿನ ಗೊಳ್ಳಿ ಬಸ್ ನಿಲ್ದಾಣ ಸ್ವಚ್ಛಗೊಳಿಸಿ ಮಾದರಿಯಾದ ಎಂ. ಗುಡ್ಡೆಕೊಪ್ಪ ಗ್ರಾ.ಪಂ ಅಧ್ಯಕ್ಷರು ಹಾಗೂ ಸ್ನೇಹ ಬಳಗ

Photo of author

By vishwachetana807@gmail.com


ಹೊಸನಗರ: ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಿರುವ ಹೊಸನಗರ ಹೊರವಲಯದ ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ ಎನ್ ಪ್ರವೀಣ  ಹಾಗೂ ಸ್ಥಳೀಯ ‘ಸ್ನೇಹ ಬಳಗ’ದ ಸದಸ್ಯರು ಶ್ರಮದಾನದ ಮೂಲಕ ಸಮಾಜ ಸೇವೆ ಮೆರೆದಿದ್ದಾರೆ.

ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕರಿನ ಗೊಳ್ಳಿ ಬಸ್ ನಿಲ್ದಾಣದ ಸುತ್ತಮುತ್ತಲ ಪ್ರದೇಶವನ್ನು ಈ ತಂಡವು ಸಂಪೂರ್ಣವಾಗಿ ಸ್ವಚ್ಛಗೊಳಿಸಿದೆ. ಮಳೆಯಿಂದಾಗಿ ಕೆಸರುಮಯವಾಗಿ, ಗುಂಡಿ ಬಿದ್ದಿದ್ದ ಬಸ್ ನಿಲ್ದಾಣದ ಮುಂಭಾಗದ ಆವರಣಕ್ಕೆ ಮಣ್ಣು ಹಾಗೂ ಜಲ್ಲಿಕಲ್ಲುಗಳನ್ನು ಹಾಕಿ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಿದ್ದಾರೆ.

ಇದರಿಂದಾಗಿ ಪ್ರತಿದಿನ ಬಸ್ಸಿಗಾಗಿ ಕಾಯುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಮಳೆಗಾಲದಲ್ಲಿ ಆಗುತ್ತಿದ್ದ ಕಿರಿಕಿರಿ ತಪ್ಪಿದಂತಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಾಣವಾಗಿರುವ ಈ ನೂತನ ಬಸ್ ನಿಲ್ದಾಣದ ಆವರಣವನ್ನು ಸುಸ್ಥಿತಿಯಲ್ಲಿಡುವ ನಿಟ್ಟಿನಲ್ಲಿ ಯುವಕರು ಕೈಗೊಂಡಿರುವ ಈ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗುದ್ದಲಿ, ಹಾರೆ ಹಿಡಿದು ಸ್ವತಃ ತಾವೇ ಶ್ರಮದಾನ ಮಾಡುವ ಮೂಲಕ ಪಂಚಾಯಿತಿ ಅಧ್ಯಕ್ಷರು ಮತ್ತು ಸ್ನೇಹ ಬಳಗದ ಯುವಕರು ತಮ್ಮೂರಿನ ಅಭಿವೃದ್ಧಿ ಹಾಗೂ ಸ್ವಚ್ಛತೆಯ ಬಗ್ಗೆ ಕಾಳಜಿ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

ಬರಹ: Chetandas Hosamane

Leave a Comment