
ಹೊಸನಗರ: ಪಟ್ಟಣದ ಹೊರವಲಯದಲ್ಲಿರುವ ಪಟಗುಪ್ಪ ಸೇತುವೆ ಬಳಿ ಸಂಜೆ ಮೀನು ಹಿಡಿಯುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಗೋವೊಂದನ್ನು ಬರ್ಬರವಾಗಿ ವಧೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಸಂಜೆ ಸುಮಾರು 4 ಗಂಟೆಯ ಹೊತ್ತಿಗೆ ಅನ್ಯ ಕೋಮಿಗೆ ಸೇರಿದ 4 ಜನ ಯುವಕರು ಮೀನು ಹಿಡಿಯುವ ಸೋಗಿನಲ್ಲಿ ಇಲ್ಲಿಗೆ ಬಂದಿದ್ದಾರೆ. ಬಳಿಕ ಮಾಂಸ ಮಾಡುವ ಉದ್ದೇಶದಿಂದ, ಅಲ್ಲಿಯೇ ಇದ್ದ ಗೋವೊಂದನ್ನು ಹಿಡಿದು ಅದರ ಕುತ್ತಿಗೆಯನ್ನು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಈ ಕೃತ್ಯ ನಡೆಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅವರತ್ತ ದೌಡಾಯಿಸಿದ್ದಾರೆ. ಜನರು ತಮ್ಮತ್ತ ಬರುತ್ತಿರುವುದನ್ನು ಕಂಡ ದುಷ್ಕರ್ಮಿಗಳು ಗೋವನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದರೆ, ದುರದೃಷ್ಟವಶಾತ್ ಅಷ್ಟರಲ್ಲಾಗಲೇ ಕುತ್ತಿಗೆಯ ಭಾಗಕ್ಕೆ ತೀವ್ರ ಗಾಯವಾಗಿದ್ದರಿಂದ ಗೋವು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದೆ. ಘಟನೆಯಿಂದ ತೀವ್ರ ಆಕ್ರೋಶಗೊಂಡಿರುವ ಸ್ಥಳೀಯರು ಕೂಡಲೇ ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ

ಈ ಬರ್ಬರ ಮತ್ತು ಅಮಾನವೀಯ ಗೋಹತ್ಯೆ ಘಟನೆಯನ್ನು ಖಂಡಿಸಿ ಸ್ಥಳೀಯ ರೈತರು ಹಾಗೂ ಗೋರಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮಾಯಕ ಪ್ರಾಣಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಇಂತಹ ಸಮಾಜಘಾತುಕ ಕೃತ್ಯಗಳನ್ನು ಈ ಭಾಗದಲ್ಲಿ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರುವ ಅವರು, ಮೀನು ಹಿಡಿಯುವ ನೆಪದಲ್ಲಿ ಬಂದು ಈ ಹೇಯ ಕೃತ್ಯವೆಸಗಿ ಪರಾರಿಯಾಗಿರುವ ದುಷ್ಕರ್ಮಿಗಳನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆಯಡಿ ಈ ಹಂತಕರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಬೇಕು; ಆರೋಪಿಗಳನ್ನು ಶೀಘ್ರವೇ ಬಂಧಿಸದೇ ಇದ್ದಲ್ಲಿ, ಮುಂಬರುವ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು, ಈ ಕೃತ್ಯದ ಹಿಂದೆ ಇರುವ ಸಂಪೂರ್ಣ ಜಾಲವನ್ನು ಪತ್ತೆ ಹಚ್ಚಿ ಮಟ್ಟಹಾಕುವುದರ ಜೊತೆಗೆ, ಹೊರಗಿನಿಂದ ಬರುವ ಅಪರಿಚಿತರ ಬಗ್ಗೆ ತೀವ್ರ ನಿಗಾ ವಹಿಸಲು ಈ ಭಾಗದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಒತ್ತಾಯವಾಗಿದೆ. ಮುಂದೆಂದೂ ನಮ್ಮ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪೊಲೀಸ್ ಹಾಗೂ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬರಹ: Chetandas Hosamane









