Hosanagara: ವಸತಿ ಶಾಲೆಯ ಕಲುಷಿತ ನೀರಿಗೆ ತತ್ತರಿಸಿದ ಗೇರುಪುರ ಗ್ರಾಮಸ್ಥರು; ಸಾಂಕ್ರಾಮಿಕ ರೋಗದ ಭೀತಿ!

Photo of author

By vishwachetana807@gmail.com

 

ಹೊಸನಗರ ತಾಲೂಕಿನ ಗೇರುಪುರದಲ್ಲಿರುವ ಶ್ರೀಮತಿ ಇಂದಿರಾಗಾಂಧಿ ಹಿಂದುಳಿದ ವರ್ಗಗಳ ವಸತಿ ಶಾಲೆಯ ಸುತ್ತಮುತ್ತಲಿನ ನಿವಾಸಿಗಳು ಇಂದು ಜೀವಭಯದಲ್ಲಿ ದಿನ ದೂಡುತ್ತಿದ್ದಾರೆ. ಶಾಲೆಯ ಆವರಣದಿಂದ ಅನಿಯಂತ್ರಿತವಾಗಿ ಹೊರಬರುತ್ತಿರುವ ಕಲುಷಿತ ತ್ಯಾಜ್ಯ ನೀರು ನೇರವಾಗಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದ್ದು, ಆ ಭಾಗದಲ್ಲಿ ಸಾಂಕ್ರಾಮಿಕ ರೋಗಗಳ ತೀವ್ರ ಭೀತಿ ಉಂಟಾಗಿದೆ. ಶಾಲೆ ಎಂದರೆ ಜ್ಞಾನದ ದೇಗುಲ, ಆದರೆ ಇಲ್ಲಿ ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಇಂದು ಅಕ್ಷರಶಃ ಕೊಳಚೆಯ ಗುಂಡಿಯಾಗಿ ಮಾರ್ಪಟ್ಟಿದ್ದು, ಅಕ್ಕಪಕ್ಕದ ನಿವಾಸಿಗಳು ದುರ್ವಾಸನೆ ಮತ್ತು ಅಸಹನೀಯ ಸ್ಥಿತಿಯಲ್ಲಿ ಬದುಕುವಂತಾಗಿದೆ.

 

ಈ ವಿಷಯದ ಬಗ್ಗೆ ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಮುಖಂಡರಿಗೆ ದೂರು ನೀಡಲಾಗಿದೆ. ಆದರೆ, ಪ್ರತಿಯೊಂದು ಬಾರಿಯೂ ಕೇವಲ ಭರವಸೆಗಳನ್ನು ನೀಡುತ್ತಾ ಬರುತ್ತಿರುವ ಇವರು, ಜನರ ಆರೋಗ್ಯದ ವಿಚಾರದಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಅಕ್ಷಮ್ಯ. ಸ್ಥಳೀಯರ ಗೋಳು ಕೇಳುವವರಿಲ್ಲದಂತಾಗಿದ್ದು, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವ ಆತಂಕದಲ್ಲಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಈ ಮೌನವು ಅವರ ಜವಾಬ್ದಾರಿಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ..

ಕೂಡಲೇ ಎಚ್ಚೆತ್ತುಕೊಳ್ಳಬೇಕಾದ ಸಂಬಂಧಪಟ್ಟ ಅಧಿಕಾರಿಗಳು, ಶಾಲೆಯ ಆವರಣದಲ್ಲಿನ ತ್ಯಾಜ್ಯ ನೀರು ಸಮಸ್ಯೆ ಬಗೆಹರಿಸಲು ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸಬೇಕು. ಜನರ ತಾಳ್ಮೆಯನ್ನು ಪರೀಕ್ಷಿಸುವುದನ್ನು ಬಿಟ್ಟು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿಯ ಕಾರ್ಯ ಕೈಗೊಳ್ಳದಿದ್ದರೆ, ಮುಂದಾಗುವ ಅನಾಹುತಗಳಿಗೆ ಸಂಪೂರ್ಣ ಹೊಣೆಗಾರಿಕೆಯನ್ನು ಆಡಳಿತ ಮಂಡಳಿ ಮತ್ತು ಸ್ಥಳೀಯ ಜನಪ್ರತಿನಿಧಿಗಳೇ ಹೊರಬೇಕಾಗುತ್ತದೆ. ಕಚೇರಿಗಳಲ್ಲಿ ಕುಳಿತು ಫೈಲ್ ಓಡಿಸುವುದನ್ನು ಬಿಟ್ಟು, ವಾಸ್ತವ ಪರಿಸ್ಥಿತಿಯನ್ನು ಅರಿತು ಕ್ರಮ ಕೈಗೊಳ್ಳುವಂತೆ ಗೇರುಪುರದ ಜನತೆ ಸರ್ಕಾರವನ್ನು ಕಠಿಣವಾಗಿ ಒತ್ತಾಯಿಸುತ್ತಿದ್ದಾರೆ.

ಬರಹ: Chetandas Hosamane

Leave a Comment