ಕಾರ್ಡ್ ಹಾಗೂ ನವೀಕರಣ ಮಾಡಿಸಿಕೊಡುವುದಾಗಿ ₹500ರಿಂದ ₹1,700ರವರೆಗೆ ಹಣ ಪಡೆದಿದ್ದಾರೆ; 2–4 ವರ್ಷ ಕಳೆದರೂ ಕಾರ್ಡ್ ನೀಡಿಲ್ಲ ಎಂದು ಕಾರ್ಮಿಕರ ಆರೋಪ.

ಕಾರ್ಮಿಕರ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ಹಣ ಪಡೆದು, ವರ್ಷಗಳಾದರೂ ಕಾರ್ಡ್ ಮಾಡಿಸಿಕೊಡದೆ ಸತಾಯಿಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಹೊಸನಗರ ತಾಲೂಕು ಅಧ್ಯಕ್ಷ ಮೊಹಮ್ಮದ್ ಹುಸೇನ್, ಉಪಾಧ್ಯಕ್ಷ ಶಂಕರಾಚಾರ್ಯ ಹಾಗೂ ಕಾರ್ಯದರ್ಶಿ ರಾಘವೇಂದ್ರ ಅವರ ವಿರುದ್ಧ ಕೆಲ ಕಾರ್ಮಿಕರು ಆರೋಪ ಮಾಡಿದ್ದಾರೆ.

ರಿಪ್ಪನ್ಪೇಟೆಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಕಾರ್ಮಿಕರು, ಕಾರ್ಮಿಕ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ತಮ್ಮಿಂದ ಹಣ ಪಡೆದುಕೊಂಡಿದ್ದಾರೆ. ಆದರೆ ಹಣ ಪಡೆದ ಬಳಿಕ ಕಾರ್ಡ್ ಮಾಡಿಸಿಕೊಡದೆ ಸತಾಯಿಸುತ್ತಿದ್ದು, ಹಲವು ಬಾರಿ ಫೋನ್ ಕರೆ ಮೂಲಕ ಸಂಪರ್ಕಿಸಿದರೂ ಕರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು.
ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಲು ಹಾಗೂ ಕಾರ್ಡ್ ನವೀಕರಣ ಮಾಡಿಸಲು ಹಣ ಪಡೆದು ಎರಡು–ಮೂರು ವರ್ಷಗಳು ಕಳೆದರೂ ಇನ್ನೂ ಕಾರ್ಡ್ ಮಾಡಿಕೊಟ್ಟಿಲ್ಲ ಎಂದು ಕಾರ್ಮಿಕರು ದೂರಿದ್ದಾರೆ.

ಬಟ್ಟೇಮಲ್ಲಪ್ಪದ ಮಹೇಶ್ ಮಾತನಾಡಿ, ಕಾರ್ಡ್ ರಿನಿವಲ್ ಮಾಡಿಕೊಡುವುದಾಗಿ ಹೇಳಿ ತಮ್ಮಿಂದ 500 ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಆದರೆ ಎರಡು ವರ್ಷ ಕಳೆದರೂ ಕಾರ್ಡ್ ನವೀಕರಣ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದರು.
ಇನ್ನು ಜನಾರ್ದನ್ ಮಾತನಾಡಿ, ತಮ್ಮಿಂದ 1,000 ರೂಪಾಯಿ ಹಣ ಪಡೆದುಕೊಂಡು ಮೂರು–ನಾಲ್ಕು ವರ್ಷ ಕಳೆದರೂ ಕಾರ್ಮಿಕ ಕಾರ್ಡ್ ಮಾಡಿಕೊಟ್ಟಿಲ್ಲ. ಬಳಿಕ ಮತ್ತೆ 250 ರೂಪಾಯಿ ಹಾಗೂ ಮತ್ತೊಮ್ಮೆ 500 ರೂಪಾಯಿ ಹಣ ಪಡೆದುಕೊಂಡಿದ್ದು, ಒಟ್ಟಾರೆಯಾಗಿ 1,700 ರೂಪಾಯಿ ಹಣ ಪಡೆದರೂ ಇದುವರೆಗೂ ಕಾರ್ಡ್ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಚಿದಾನಂದ ಮಾತನಾಡಿ, ಕಾರ್ಮಿಕ ಕಾರ್ಡ್ ಮಾಡಿಕೊಡಬೇಕಾದರೆ ಹೆಚ್ಚಿನ ಹಣ ನೀಡಬೇಕು ಎಂದು ತಾಲೂಕು ಅಧ್ಯಕ್ಷ ಮೊಹಮ್ಮದ್ ಹುಸೇನ್ ತಮ್ಮ ಬಳಿ ಕೇಳಿದ್ದಾರೆ ಎಂದು ಆರೋಪಿಸಿದರು. ಕಾರ್ಡ್ ಮಾಡಿಕೊಡಲು 1,000 ರೂಪಾಯಿ ಹಣ ನೀಡುವಂತೆ ಕೇಳಲಾಗಿದೆ ಎಂದು ಅವರು ದೂರಿದರು.
ಕಾರ್ಮಿಕ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ಹಣ ಪಡೆದುಕೊಂಡು, ಬಳಿಕ ಕಾರ್ಡ್ ನೀಡದೆ ಸತಾಯಿಸುತ್ತಿದ್ದಾರೆ ಎಂಬುದು ಕಾರ್ಮಿಕರ ಒಟ್ಟಾರೆ ಆರೋಪವಾಗಿದೆ.
ಈ ಸಂದರ್ಭದಲ್ಲಿ ಪ್ರವೀಣ್ ಆಚಾರ್ ರಿಪ್ಪನ್ ಪೇಟೆ , ಚಿದಾನಂದ, ಸುದೇಶ್ ರಿಪ್ಪನ್ ಪೇಟೆ, ಜನಾರ್ದನ್ ಬಟ್ಟೆ ಮಲ್ಲಪ್ಪ , ಹರತಳು ಮಹೇಶ್, ಬಟ್ಟೇಮಲ್ಲಪ್ಪದ ಸತ್ಯನಾರಾಯಣ ಆಚಾರ್ ಸೇರಿದಂತೆ ಹಲವು ಕಾರ್ಮಿಕರು ಉಪಸ್ಥಿತರಿದ್ದರು.
ಬರಹ: Chetandas Hosamane









