ಅಕ್ಷರದೊಂದಿಗೆ ಸಂಸ್ಕೃತಿ ಬೆಸೆಯಲಿ: ಅಮೃತ ಪದವಿ ಪೂರ್ವ ಕಾಲೇಜಿನ ಸಾಧನೆಗೆ ಮೆಚ್ಚುಗೆ!

Photo of author

By vishwachetana807@gmail.com

 

ಹೊಸನಗರ/ರಿಪ್ಪನ್ ಪೇಟೆ: ಶಿಕ್ಷಣ ಎಂದರೆ ಕೇವಲ ಅಕ್ಷರಭ್ಯಾಸವಲ್ಲ. ನಾವು ಪಡೆಯುವ ಶಿಕ್ಷಣವು ನಮ್ಮ ಸಂಸ್ಕೃತಿಯ ಬೇರುಗಳನ್ನು ತಳಮೂಲದಿಂದ ಅರಿಯುವ ಪ್ರೇರಕ ಶಕ್ತಿಯಾಗಬೇಕು. ವೈಯಕ್ತಿಕ ಬದುಕಿನ ಜೊತೆಗೆ ಸಮಾಜದ ಬಗ್ಗೆ ಗೌರವ ಮತ್ತು ಜವಾಬ್ದಾರಿಯುಳ್ಳ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆಗ ಮಾತ್ರ ಶಿಕ್ಷಣಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು, ಅಮೃತದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಅನಾಚಾರ ಮತ್ತು ಭ್ರಷ್ಟಾಚಾರಗಳಲ್ಲಿ ವಿದ್ಯಾವಂತರೇ ಭಾಗಿಯಾಗುತ್ತಿರುವುದು ದುರದೃಷ್ಟಕರ. ಉನ್ನತ ಶಿಕ್ಷಣ ಮತ್ತು ಹುದ್ದೆ ಹೊಂದಿರುವವರೇ ಲಂಚ ಹಾಗೂ ಭ್ರಷ್ಟಾಚಾರಕ್ಕೆ ಕಾರಣರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಜಗತ್ತಿನ ಅನೇಕ ಸಣ್ಣ ರಾಷ್ಟ್ರಗಳು ತಮ್ಮ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮತ್ತು ಪೌರ ಪ್ರಜ್ಞೆಯಿಂದ ಅಭಿವೃದ್ಧಿ ಹೊಂದಿವೆ. ಆದರೆ ಭಾರತದಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿರುವುದಕ್ಕೆ ಪೌರ ಪ್ರಜ್ಞೆಯ ಕೊರತೆಯೇ ಪ್ರಮುಖ ಕಾರಣವಾಗಿದೆ. ದೇಶದ ಗೌರವವು ಅದರ ಪ್ರಜೆಗಳ ಪೌರ ಪ್ರಜ್ಞೆಯ ಮೇಲೆ ನಿಂತಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಸರ್ಕಾರಿ ಪದವಿ ಪೂರ್ವ ಕಾಲೇಜು ಅತ್ಯುತ್ತಮ ಫಲಿತಾಂಶ ನೀಡುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲೇ ಮಾದರಿ ಕಾಲೇಜಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ. ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುವಂತೆ ಹೆಚ್ಚಿನ ದಾಖಲಾತಿ ಪಡೆಯುತ್ತಿರುವುದು ಹಾಗೂ ಪೋಷಕರ ಮೊದಲ ಆಯ್ಕೆಯಾಗಿರುವುದು ಇಲ್ಲಿನ ಗುಣಮಟ್ಟದ ಬೋಧನೆಗೆ ಸಾಕ್ಷಿಯಾಗಿದೆ. ಇಂತಹ ಕಾಲೇಜುಗಳು ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ 2026ರ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 60 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪ್ರೊ. ಗಣೇಶ್ ಮೂರ್ತಿ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಡಾ. ಜಿ.ಡಿ. ನಾರಾಯಣಪ್ಪ ದತ್ತಿನಿಧಿ ಪ್ರಶಸ್ತಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ವೈದ್ಯರತ್ನ ಡಾ. ಜಿ.ಡಿ. ನಾರಾಯಣಪ್ಪ, ವಿಶ್ರಾಂತ ಪ್ರಾಂಶುಪಾಲ ಮಹಮದ್ ನಜಹತ್, ಅನಂತಮೂರ್ತಿ ಅವುಕ, ಎಸ್‌ಡಿಸಿ ಕಾರ್ಯಾಧ್ಯಕ್ಷ ಟಿ.ಡಿ. ಸೋಮಶೇಖರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹಾಲಪ್ಪ ಸಂಕೂರು ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಉಪನ್ಯಾಸಕ ಶಂಕರಪ್ಪ ಕಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ್ ಸೋಮಯಾಜಿ ಸ್ವಾಗತಿಸಿದರು. ಫ್ರಾನ್ಸಿಸ್ ಬೆಂಜಮಿನ್ ಕಾರ್ಯಕ್ರಮ ನಿರೂಪಿಸಿದರು.

ಬರಹ: Chetandas Hosamane

Leave a Comment