ಜಯ ಕರ್ನಾಟಕ ಸಂಘಟನೆಯ ಎಚ್ಚರಿಕೆಗೆ ತಕ್ಷಣ ಸ್ಪಂದಿಸಿದ ಡಿಎಚ್‌ಒ – ಮಂಡಗದ್ದೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆಗಳ ಪರಿಶೀಲನೆ

Photo of author

By vishwachetana807@gmail.com

 

ತೀರ್ಥಹಳ್ಳಿ: ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕಾರ್ಯವೈಖರಿ ಕುರಿತು ಸಾರ್ವಜನಿಕರಿಂದ ನಿರಂತರ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಜಯ ಕರ್ನಾಟಕ ಸಂಘಟನೆಯ ತೀರ್ಥಹಳ್ಳಿ ತಾಲೂಕು ಅಧ್ಯಕ್ಷರಾದ ಕುರುವಳ್ಳಿ ನಾಗರಾಜ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಅವರಿಗೆ ಎಚ್ಚರಿಕೆ ನೀಡಿ, ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರೆಯದಿದ್ದರೆ ಸಂಘಟನೆಯ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ತಕ್ಷಣ ಸ್ಪಂದಿಸಿದ ಜಿಲ್ಲಾ ಡಿಎಚ್‌ಒ ಡಾ. ನಟರಾಜ್ ಅವರು ಇಂದು ಸ್ವತಃ ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯರು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಆಸ್ಪತ್ರೆಯಲ್ಲಿ ಬಡವರು ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆರೋಗ್ಯ ಕೇಂದ್ರದಲ್ಲಿ ಇರುವ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂಬ ಭರವಸೆಯನ್ನೂ ನೀಡಿದರು.ಗ್ರಾಮೀಣ ಜನರ ಆರೋಗ್ಯ ಹಕ್ಕುಗಳ ರಕ್ಷಣೆಗೆ ಧ್ವನಿಯಾಗಿರುವ ಜಯ ಕರ್ನಾಟಕ ಸಂಘಟನೆಯ ಜನಪರ ಕಾಳಜಿಗೆ ಇದು ದೊರೆತ ಸಕಾರಾತ್ಮಕ ಸ್ಪಂದನೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.ಹಳ್ಳಿಗಾಡಿನ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು ಎಂಬ ಉದ್ದೇಶದಿಂದ ನೀಡಿದ ಪತ್ರಿಕಾ ಹೇಳಿಕೆ ಫಲಶ್ರುತಿ ನೀಡಿರುವುದು ಸಂತಸದ ವಿಷಯವಾಗಿದೆ. ಜನರ ಸಮಸ್ಯೆಗೆ ಕೂಡಲೇ ಸ್ಪಂದಿಸಿ, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಜಿಲ್ಲಾ ಡಿಎಚ್‌ಒ ಡಾ. ನಟರಾಜ್ ಅವರ ಕಾರ್ಯಕ್ಷಮತೆ ಹಾಗೂ ಜನಪರ ಕಾಳಜಿಯನ್ನು ಜಯ ಕರ್ನಾಟಕ ಸಂಘಟನೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ. ಇಂತಹ ತ್ವರಿತ ಸ್ಪಂದನೆಯಿಂದ ಸಾರ್ವಜನಿಕರ ಆರೋಗ್ಯ ಸೇವೆ ಇನ್ನಷ್ಟು ಸುಧಾರಿಸಲಿ ಎಂದು ಸಂಘಟನೆ ಆಶಿಸಿದೆ.ಮುಂದೆಯೂ ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ವಿಷಯದಲ್ಲಿಯೂ ಜಯ ಕರ್ನಾಟಕ ಸಂಘಟನೆ ಜನರ ಪರವಾಗಿ ನಿರಂತರ ಹೋರಾಟ ನಡೆಸಲಿದೆ ಎಂದು ತಾಲೂಕು ಅಧ್ಯಕ್ಷರಾದ ಕುರುವಳ್ಳಿ ನಾಗರಾಜ್ ತಿಳಿಸಿದ್ದಾರೆ.

ಬರಹ: Chetandas Hosamane

Leave a Comment