ಐವಿಎಫ್ ಆಕ್ಸೆಸ್ ಫರ್ಟಿಲಿಟಿ, ಆರ್ಯ ಈಡಿಗರ ಸಂಘ ಹಾಗೂ ಶ್ರೀ ನಾರಾಯಣ ಗುರು ಮಲೆನಾಡು ಪತ್ತಿನ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ

ಹೊಸನಗರ, ಜು. 25 ಐವಿಎಫ್ ಆಕ್ಸೆಸ್ ಫರ್ಟಿಲಿಟಿ (ಬೆಂಗಳೂರು), ಹೊಸನಗರ ತಾಲೂಕು ಆರ್ಯ ಈಡಿಗರ ಸಂಘ (ರಿ.) ಹಾಗೂ ಶ್ರೀ ನಾರಾಯಣ ಗುರು ಮಲೆನಾಡು ಪತ್ತಿನ ಸಹಕಾರ ಸಂಘ (ರಿ.) ಹೊಸನಗರ ಇವರ ಸಂಯುಕ್ತಾಶ್ರಯದಲ್ಲಿ ಜುಲೈ 25ರಂದು ಪಟ್ಟಣದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆದ ಶಿಬಿರವನ್ನು ಬ್ಯಾಂಕಿನ ಅಧ್ಯಕ್ಷ ಮುರಳೀಧರ ಜಿ.ಇ. ಉದ್ಘಾಟಿಸಿ ಮಾತನಾಡಿ, ಆರೋಗ್ಯಕರ ಜೀವನಶೈಲಿ, ಶುಚಿತ್ವ ಮತ್ತು ನೈರ್ಮಲ್ಯದ ಮಹತ್ವವನ್ನು ಒತ್ತಿಹೇಳಿದರು. ಇಂದಿನ ಆಹಾರ ಪದ್ಧತಿ, ಪರಿಸರ ಮಾಲಿನ್ಯ ಹಾಗೂ ಒತ್ತಡದ ಜೀವನಶೈಲಿಯಿಂದ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಯುವಜನತೆ ದುಶ್ಚಟಗಳಿಂದ ದೂರವಿದ್ದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.


ಶಿಬಿರದಲ್ಲಿ ತಪಾಸಣೆ ನಡೆಸಿದ ಬೆಂಗಳೂರಿನ ಐವಿಎಫ್ ಆಕ್ಸೆಸ್ ಫರ್ಟಿಲಿಟಿಯ ಬಂಜೆತನ ತಜ್ಞೆ ಡಾ. ಮೇಘನಾ ಮಾತನಾಡಿ, ವಿವಾಹವಾಗಿ ಒಂದು ವರ್ಷ ಕಳೆದರೂ ಗರ್ಭಧಾರಣೆಯಾಗದ ದಂಪತಿಗಳು, ಪುನರಾವರ್ತಿತ ಗರ್ಭಪಾತದ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು ಹಾಗೂ ಪುರುಷ ಬಂಜೆತನದ ಸಮಸ್ಯೆ ಇರುವವರು ತಜ್ಞರ ಸಲಹೆ ಮತ್ತು ಸೂಕ್ತ ತಪಾಸಣೆಯನ್ನು ಪಡೆಯುವುದು ಅಗತ್ಯ ಎಂದು ತಿಳಿಸಿದರು.
ಶಿಬಿರದಲ್ಲಿ ಹೊಸನಗರ ತಾಲೂಕಿನ ಅನೇಕ ನಾಗರಿಕರು ಭಾಗವಹಿಸಿ, ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಮಾರ್ಗದರ್ಶನವನ್ನು ಪಡೆದುಕೊಂಡರು.
ಬರಹ: Chetandas Hosamane









