ರೋಡ್ ನೆಟ್‌ವರ್ಕ್ ಗ್ರಿಡ್ ಯೋಜನೆಗೂ ಮುನ್ನ ಸ್ಥಳ ಪರಿಶೀಲಿಸಿ: ವಸವೆ, ಗೊರಗೋಡು ಗ್ರಾಮಸ್ಥರ ಮನವಿ

Photo of author

By vishwachetana807@gmail.com

ರೈತರ ಕೃಷಿ ಜಮೀನು ಉಳಿಸಲು ಪರ್ಯಾಯ ರಸ್ತೆ ಮಾರ್ಗಕ್ಕೆ ಆದ್ಯತೆ ನೀಡುವಂತೆ ಗ್ರಾಮಸ್ಥರ ಒತ್ತಾಯ

ಹೊಸನಗರ: ರೈತರ ಕೃಷಿ ಹಾಗೂ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಪ್ರಸ್ತಾವಿತ ರೋಡ್ ನೆಟ್‌ವರ್ಕ್ ಗ್ರಿಡ್ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕೃಷಿಕರ ಅಭಿಪ್ರಾಯ ಪಡೆದು ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿ ವಸವೆ ಹಾಗೂ ಗೊರಗೋಡು ಗ್ರಾಮಸ್ಥರು ಸೋಮವಾರ ತಹಶೀಲ್ದಾರ್ ಕೆ.ಎನ್. ಭರತ್ ರಾಜ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೃಷಿಕ ವಸವೆ ಪ್ರಶಾಂತ್ ಭಟ್ ಮಾತನಾಡಿ, ವಸವೆ ಮತ್ತು ಗೊರಗೋಡು ಗ್ರಾಮಗಳಲ್ಲಿ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ 20ಕ್ಕೂ ಹೆಚ್ಚು ಕುಟುಂಬಗಳ ಕೃಷಿ ಜಮೀನುಗಳಿಗೆ ಪ್ರಸ್ತಾವಿತ ಯೋಜನೆಯಿಂದ ತೊಂದರೆಯಾಗುವ ಆತಂಕವಿದೆ ಎಂದು ಹೇಳಿದರು.

ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಗ್ರಾಮಸ್ಥರ ವಿರೋಧವಿಲ್ಲ. ಆದರೆ, ಯೋಜನೆ ಅನುಷ್ಠಾನಕ್ಕೂ ಮುನ್ನ ಅಧಿಕಾರಿಗಳು ರೈತರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಕೃಷಿ ಭೂಮಿಯನ್ನು ಸಾಧ್ಯವಾದಷ್ಟು ಉಳಿಸುವ ನಿಟ್ಟಿನಲ್ಲಿ ಪರ್ಯಾಯ ರಸ್ತೆ ಮಾರ್ಗಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ರೈತರ ಕೃಷಿ ಜಮೀನು ಹಾಗೂ ಜೀವನೋಪಾಯಕ್ಕೆ ಅನಗತ್ಯ ಹಾನಿಯಾಗದಂತೆ ಯೋಜನೆಯ ನಕ್ಷೆ ಮತ್ತು ರಸ್ತೆ ಮಾರ್ಗವನ್ನು ಮರುಪರಿಶೀಲಿಸಬೇಕು. ಕೃಷಿಕರ ಆಕ್ಷೇಪಣೆಗಳನ್ನು ಪರಿಗಣಿಸದೆ ಯೋಜನೆಗೆ ಅಂತಿಮ ಅನುಮೋದನೆ ನೀಡಬಾರದು. ರೈತರ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೃಷಿಕರಾದ ಚಂದ್ರಶೇಖರಗೌಡ, ತೋಟಪ್ಪ, ರೇವಣ್ಣ, ನಾಗರಾಜಗೌಡ, ಶಿವಪ್ಪ, ಉದಯ, ರಾಘವೇಂದ್ರ, ಸಂತೋಷ್, ಅಬ್ದುಲ್ ಸಲಂ, ರಾಜೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬರಹ: Chetandas Hosamane

Leave a Comment