ಸಾಲದ ಹೊರೆ, ಕೆಲಸದ ಅನಿಶ್ಚಿತತೆ: ಚಂಪಕ ಸರಸ್ಸು ಕೊಳದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Photo of author

By vishwachetana807@gmail.com

ಸಾಗರ (ಆನಂದಪುರ): ಸಾಲದ ಹೊರೆ ಹಾಗೂ ಕೆಲಸದ ಅನಿಶ್ಚಿತತೆಯಿಂದ ಮನನೊಂದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಆನಂದಪುರ ಸಮೀಪದ ಚಂಪಕ ಸರಸ್ಸು ಕೊಳದಲ್ಲಿ ನಡೆದಿದೆ.

ಮೃತರನ್ನು ಆನಂದಪುರದ ದಾಸಕೊಪ್ಪ ಗ್ರಾಮದ ಯೂಸುಫ್ ಶರೀಫ್ ಅವರ ಪುತ್ರ ಚಾಂದ್‌ಪಾಷಾ (46) ಎಂದು ಗುರುತಿಸಲಾಗಿದೆ. ಅವರು ಚಾಲಕ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಕುಟುಂಬಸ್ಥರ ದೂರಿನ ಪ್ರಕಾರ, ಜೀವನ ನಿರ್ವಹಣೆಗಾಗಿ ಚಾಂದ್‌ಪಾಷಾ ಅವರು ಕೈಗಡ ಸಾಲ ಮಾಡಿಕೊಂಡಿದ್ದರು. ಆದರೆ ಕೆಲಸದಲ್ಲಿ ಸ್ಥಿರತೆ ಇಲ್ಲದ ಕಾರಣ ಸಾಲ ತೀರಿಸಲು ಸಾಧ್ಯವಾಗದೆ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ಸೆ.30ರಂದು ಸಂಜೆ ಸುಮಾರು 6.30ರ ವೇಳೆಗೆ ಮನೆಯಿಂದ ಹೊರಟಿದ್ದ ಅವರು ರಾತ್ರಿ 10 ಗಂಟೆಯಾದರೂ ಮನೆಗೆ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹಾಗೂ ಸಂಬಂಧಿಕರು ವಿವಿಧೆಡೆ ಹುಡುಕಾಟ ನಡೆಸಿದ್ದರು.

ಅ.1ರಂದು ಬೆಳಗ್ಗೆ ಸುಮಾರು 7.30ರ ವೇಳೆಗೆ ಚಂಪಕ ಸರಸ್ಸು ಕೊಳದ ಬಳಿ ಹುಡುಕಾಟ ನಡೆಸಿದಾಗ ಚಾಂದ್‌ಪಾಷಾ ಅವರ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಮೇಲಕ್ಕೆತ್ತಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಸಾಲದ ಹೊರೆ ಹಾಗೂ ಕೆಲಸದ ಸಮಸ್ಯೆಯಿಂದ ಮನನೊಂದು ಈ ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬರಹ: Chetandas Hosamane

Leave a Comment