
ಹೊಸನಗರ: ವಿಶೇಷ ಸಂಸತ್ ಅಧಿವೇಶನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಹೊಸನಗರ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆ ಮತ್ತು ಮಲೆನಾಡಿನ ಸಮಸ್ಯೆಗಳ ಕುರಿತು ಅತ್ಯಂತ ಪರಿಣಾಮಕಾರಿಯಾಗಿ ಧ್ವನಿ ಎತ್ತಿರುವುದನ್ನು ನಗರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಶೆಟ್ಟಿ ಅವರು ಈ ಭಾಗದ ಸಮಸ್ತ ಜನತೆಯ ಪರವಾಗಿ ಅಭಿನಂದಿಸಿದ್ದಾರೆ.

ಕ್ಷೇತ್ರ ಮರುಸ್ಥಾಪನೆಗಾಗಿ ನಡೆದ ಪಾದಯಾತ್ರೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಸಂಸದರು ಸಂಸತ್ತಿನಲ್ಲಿ ಮಾತನಾಡಿದ್ದಾರೆ. 2008ರಲ್ಲಿ ಅಸ್ತಿತ್ವ ಕಳೆದುಕೊಂಡ ಹೊಸನಗರ ಕ್ಷೇತ್ರಕ್ಕೆ ವಿಶೇಷ ಭೌಗೋಳಿಕ ಮಾನ್ಯತೆ ನೀಡಬೇಕು ಹಾಗೂ ಐದು ಜಲಾಶಯಗಳಿಗಾಗಿ ತ್ಯಾಗ ಮಾಡಿದ ಈ ಭಾಗದ ಜನರಿಗೆ ನ್ಯಾಯ ಸಿಗಬೇಕು ಎಂದು ಸಂಸದರು ಪ್ರತಿಪಾದಿಸಿದ್ದಾರೆ. ಪಶ್ಚಿಮ ಘಟ್ಟದ ಕಠಿಣ ಭೂಪ್ರದೇಶಗಳನ್ನು ಪರಿಗಣಿಸಿ, ಈಶಾನ್ಯ ರಾಜ್ಯಗಳ ಮಾದರಿಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ವಿಶೇಷ ಮಾನದಂಡ ಅನುಸರಿಸಬೇಕೆಂಬ ಅವರ ಆಗ್ರಹವು ಅರ್ಥಪೂರ್ಣವಾಗಿದೆ. ಮಲೆನಾಡಿಗರ ದಶಕಗಳ ಬೇಡಿಕೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದ ಸಂಸದರಿಗೆ ಅಭಿನಂದನೆಗಳು ಎಂದು ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.
ಹೊಸನಗರ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆಯು ಈ ಭಾಗದ ಜನರ ದಶಕಗಳ ನ್ಯಾಯಯುತ ಬೇಡಿಕೆಯಾಗಿದೆ. ಪಾದಯಾತ್ರೆಯ ಸಂದರ್ಭದಲ್ಲಿ ನೀಡಿದ ಮಾತಿನಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಂಸತ್ತಿನಲ್ಲಿ ಮಲೆನಾಡಿನ ಧ್ವನಿಯಾಗಿರುವುದು ಸ್ವಾಗತಾರ್ಹ. ಪಕ್ಷಭೇದ ಮರೆತು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕರುಣಾಕರ ಶೆಟ್ಟಿ ಅವರ ನಡೆ, ಕ್ಷೇತ್ರದ ಹಿತದೃಷ್ಟಿಯಿಂದ ಶ್ಲಾಘನೀಯ. ಕೇಂದ್ರ ಸರ್ಕಾರವು ಮಲೆನಾಡಿನ ಭೌಗೋಳಿಕ ಸವಾಲುಗಳನ್ನು ಮನಗಂಡು ಶೀಘ್ರವೇ ಪೂರಕ ನಿರ್ಧಾರ ಕೈಗೊಳ್ಳಲಿ ಎಂಬುದು ನಮ್ಮ ಆಶಯ.
ಸಂಪಾದಕರು:- ವಿಶ್ವ ಚೇತನ
ಬರಹ:- ಚೇತನ್ ದಾಸ್ ಹೊಸಮನೆ









