
ಕೋಣಂದೂರು: ‘ಪ್ರಾಕೃತಿಕ ವನ್ಯ ಸಂಪತ್ತು ಮತ್ತು ಜೀವ ವೈವಿಧ್ಯದ ಸಂರಕ್ಷಣೆ ಈಗಿನ ಅಗತ್ಯವಾಗಿದೆ’ ಎಂದು ಅರಣ್ಯ ಸಂಚಾರಿ ದಳದ ಪಿಎಸ್‌ಐ ಕೆ.ವಿನಾಯಕ ತಿಳಿಸಿದರು.
ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ಉತ್ಪನ್ನಗಳ ಅವ್ಯಾಹತ ಲೂಟಿಯಿಂದಾಗಿ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ. ಇದರಿಂದಾಗಿ ಮಾನವ ಮತ್ತು ವನ್ಯ ಜೀವಿಗಳ ನಡುವೆ ಸಂಘರ್ಷ ಉಂಟಾಗುತ್ತಿದೆ. ಇದನ್ನು ತಡೆಯುವಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದೆ. ನೈಜ ಕಾಡು ಬೆಳೆಸುವ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಅರಣ್ಯ ರಕ್ಷಣೆಯ ಜೊತೆಗೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು’ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ಕೆ.ಎಸ್. ವಾಸುದೇವ ವಹಿಸಿದ್ದರು. ಪ್ರಮುಖರಾದ ಬಿ.ಕೆ.ಪ್ರಫುಲ್ಲಾ, ಎಚ್.ವಿ.ಮುರಳೀಧರ, ಹಾಗೂ ಸುಜಾತಾ ಮಹಲೆ ಉಪಸ್ಥಿತರಿದ್ದರು.
ಬರಹ: ಚೇತನ್ ದಾಸ್ ಹೊಸಮನೆ









