ಎಂ. ಗುಡ್ಡೆಕಕೊಪ್ಪ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಸುಸಜ್ಜಿತಗೊಳಿಸುವ ಮತ್ತು ಮಕ್ಕಳ ಕಲಿಕಾ ಪರಿಸರವನ್ನು ಆಕರ್ಷಣೀಯವಾಗಿಸುವ ನಿಟ್ಟಿನಲ್ಲಿ, ಎಂ. ಗುಡ್ಡೆಕಕೊಪ್ಪ ಗ್ರಾಮ ಪಂಚಾಯತ್ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಿರುವ ಪೀಠೋಪಕರಣ ಹಾಗೂ ಆಟೋಪಕರಣಗಳನ್ನು ವಿತರಿಸುವ ಕಾರ್ಯಕ್ರಮವನ್ನು ಇಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.


ಅಂಗನವಾಡಿ ಕೇಂದ್ರಗಳಿಗೆ ಬರುವ ಪುಟ್ಟ ಮಕ್ಕಳ ಆಟೋಟಗಳಿಗೆ ಅನುಕೂಲವಾಗುವಂತೆ ಆಟೋಪಕರಣಗಳು ಹಾಗೂ ಅವರಿಗೆ ಕುಳಿತು ಪಾಠ ಕಲಿಯಲು ಅಗತ್ಯವಿರುವ ಟೇಬಲ್ ಮತ್ತು ಕುರ್ಚಿಗಳನ್ನು ಒದಗಿಸಲಾಗಿದೆ. ಈ ಸೌಲಭ್ಯಗಳಿಂದಾಗಿ ಅಂಗನವಾಡಿ ಕೇಂದ್ರಗಳಲ್ಲಿನ ಶೈಕ್ಷಣಿಕ ವಾತಾವರಣವು ಇನ್ನಷ್ಟು ಸುಧಾರಿಸಲಿದೆ ಮತ್ತು ಮಕ್ಕಳಿಗೆ ಆಟದ ಮೂಲಕ ಕಲಿಯಲು ಹೆಚ್ಚು ಉತ್ತೇಜನ ಸಿಗಲಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಮಾಜಿ ಅಧ್ಯಕ್ಷರಾದ ಜಿ.ಎನ್. ಪ್ರವೀಣ್ ಅವರು ಗ್ರಾಮದ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕುರಿತಂತೆ ಸಲ್ಲಿಸಿದ್ದ ಬೇಡಿಕೆಗೆ ಸ್ಪಂದಿಸಿದ ಗೋಪಾಲಕೃಷ್ಣ ಬೇಳೂರುಅವರು, ಕೂಡಲೇ ಸೌಕರ್ಯಗಳನ್ನು ಒದಗಿಸುವಂತೆ ಆದೇಶಿಸಿದ್ದರು. ಈ ಆದೇಶದ ಅನ್ವಯ, ಪಂಚಾಯತ್ ವತಿಯಿಂದವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಧರ್ಮಪ್ಪ ಮತ್ತು ಪ್ರದೀಪ್ ಉಪಸ್ಥಿತರಿದ್ದು ಸೌಕರ್ಯಗಳನ್ನು ವಿತರಿಸಿದರು. ಅಂಗನವಾಡಿ ಸಹಾಯಕಿ ಗೀತಾ, ಶಾಂಭವಿ , ಮಾಜಿ ಅಧ್ಯಕ್ಷರಾದ ಜಿ.ಎನ್. ಪ್ರವೀಣ್ ಮತ್ತು ಸ್ಥಳೀಯರಾದ ಸಚಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.
ಗ್ರಾಮ ಪಂಚಾಯತ್‌ನ ಈ ಕಾರ್ಯಕ್ಕೆ ಪಾಲಕರು ಹಾಗೂ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಜನಪರ ಯೋಜನೆಗಳು ಅನುಷ್ಠಾನವಾಗಲಿ ಎಂದು ಆಶಿಸಿದ್ದಾರೆ.
ಬರಹ: Chetandas Hosamane









