ಹೊಸನಗರ: ಪ್ರಗತಿಪರ ಕೃಷಿಕ, ಹಿರಿಯ ಪುರೋಹಿತ ದಿವಂಗತ ತೊಗರೆ ಸುಬ್ಬಭಟ್ಟರಿಗೆ ಗ್ರಾಮಸ್ಥರಿಂದ ಭಾವಪೂರ್ಣ ನುಡಿ ನಮನ

Photo of author

By vishwachetana807@gmail.com

ಹೊಸನಗರ: ಇತ್ತೀಚೆಗೆ ನಿಧನರಾದ ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಗರೆ ಗ್ರಾಮದ ನಿವಾಸಿ, ಪ್ರಗತಿಪರ ಕೃಷಿಕ ಹಾಗೂ ಹಿರಿಯ ಪುರೋಹಿತ ದಿವಂಗತ ಸುಬ್ಬಭಟ್ಟ (90) ಅವರಿಗೆ ತ್ರಿಣಿವೆ ಗ್ರಾಮಸ್ಥರು ಒಗ್ಗೂಡಿ ಸಾಮೂಹಿಕವಾಗಿ ‘ನುಡಿ ನಮನ’ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಗೌರವ ಸಮರ್ಪಿಸಿದರು. ತೊಗರೆ ಗ್ರಾಮದ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಶ್ರದ್ಧಾಂಜಲಿ ಸಭೆಯಲ್ಲಿ, ದಿವಂಗತರ ಶಿಸ್ತುಬದ್ಧ ಜೀವನ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಲಾಯಿತು.

ಸುಬ್ಬಭಟ್ಟರ ಕುಟುಂಬ ವರ್ಗದ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ತ್ರಿಣಿವೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಅವರು ಮಾತನಾಡಿ, “ಮೂಲತಃ ನಾಗರಕೊಡಿಗೆ ಗ್ರಾಮದವರಾದ ಸುಬ್ಬಭಟ್ಟರು ಅಸಾಧಾರಣ ಛಲದ ಸ್ವಭಾವದವರಾಗಿದ್ದರು. ಹಿಡಿದ ಯಾವುದೇ ಕೆಲಸವನ್ನು ಶಕ್ತಿಮೀರಿ ಪ್ರಯತ್ನಿಸಿ ಯಶಸ್ವಿಗೊಳಿಸುತ್ತಿದ್ದರು. ಅವರ ಸತತ ಪ್ರಯತ್ನ ಹಾಗೂ ಮಾರ್ಗದರ್ಶನದ ಫಲವಾಗಿಯೇ ಗ್ರಾಮಕ್ಕೆ ಅಂಚೆ ಕಚೇರಿ, ಭಜನಾ ಮಂಡಳಿ ಹಾಗೂ ಶ್ರೀ ನಾಗಲಿಂಗೇಶ್ವರ ದೇವಾಲಯ ನಿರ್ಮಾಣವಾಯಿತು” ಎಂದು ಸ್ಮರಿಸಿದರು. ಕೇವಲ ಪೌರೋಹಿತ್ಯಕ್ಕೆ ಸೀಮಿತರಾಗದ ಸುಬ್ಬಭಟ್ಟರು, ತಮ್ಮ ಜಮೀನಿನಲ್ಲಿ ಕಬ್ಬು, ಭತ್ತ, ಅಡಕೆ ಸೇರಿದಂತೆ ಹಲವು ಬೆಳೆಗಳ ಪ್ರಾಯೋಗಿಕ ಕೃಷಿ ಮಾಡುವ ಮೂಲಕ ತಾಲೂಕಿನಾದ್ಯಂತ ಪ್ರಗತಿಪರ ಕೃಷಿಕ ಎಂದೇ ಖ್ಯಾತರಾಗಿದ್ದರು. ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

​”ಪ್ರತಿಫಲದ ಅಪೇಕ್ಷೆ ಇಲ್ಲದೆ, ಯಾರೊಬ್ಬರ ಮನಸ್ಸಿಗೂ ನೋವುಂಟು ಮಾಡದೆ, ಕಷ್ಟ ಎಂದು ಬಂದವರಿಗೆ ಜಾತಿ-ಮತದ ಭೇದವಿಲ್ಲದೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದ ಆ ಹಿರಿಯ ಜೀವಕ್ಕೆ ಭಗವಂತ ಸದ್ಗತಿ ಕರುಣಿಸಲಿ” ಎಂದು ಅವರು ಪ್ರಾರ್ಥಿಸಿದರು. ನುಡಿ ನಮನ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಸುಬ್ಬಭಟ್ಟರೊಂದಿಗಿನ ತಮ್ಮ ಒಡನಾಟದ ಅಮೂಲ್ಯ ನೆನಪುಗಳನ್ನು ಮೆಲುಕು ಹಾಕಿದರು. ಶ್ರೀ ಸಿದ್ದಿ ವಿನಾಯಕ ಮಹಿಳಾ ಭಜನಾ ಮಂಡಳಿಯ ಸದಸ್ಯೆಯರು ಸುಶ್ರಾವ್ಯವಾಗಿ ಭಜನೆ ಹಾಡುವ ಮೂಲಕ ಭಕ್ತಿ ಸಮರ್ಪಿಸಿದರು. ವೇದಿಕೆಯಲ್ಲಿ ಕುಟುಂಬದ ಪ್ರಸಾದ್ ಭಟ್, ಗಣೇಶ್ ಭಟ್, ದೇವಸ್ಥಾನ ಸಮಿತಿಯ ಅಧ್ಯಕ್ಷರು ಸೇರಿದಂತೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ರಾಘವೇಂದ್ರ ಜೋಯಿಸ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ತೊಗರೆ ದೇವೇಂದ್ರ ಅವರು ವಂದನಾರ್ಪಣೆ ಮಾಡಿದರು.

ಬರಹ: Chetandas Hosamane

Leave a Comment