ಹೊಸನಗರದ ಜನತೆಗೆ ಸುವರ್ಣಾವಕಾಶ: ಕಳೂರು ಸೊಸೈಟಿಯಲ್ಲಿ ಮೂರು ದಿನಗಳ ಕಾಲ ಹಲಸು ಮತ್ತು ಆಹಾರ ಮೇಳದ ದರ್ಬಾರ್!

ಹೊಸನಗರ: ಕೃಷಿ ಸಂಸ್ಕೃತಿ ಮತ್ತು ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಸನಗರದ ಚೌಡಮ್ಮ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಸಮೀಪದ ಕಳೂರು ಸೊಸೈಟಿಯ ನೂತನ ‘ವಜ್ರ ಮಹೋತ್ಸವ ಕಟ್ಟಡ’ದಲ್ಲಿ ಇದೇ ಜುಲೈ 3, 4 ಮತ್ತು 5 ರಂದು ಬೃಹತ್ ‘ಹಲಸು, ಮಾವು ಮತ್ತು ಆಹಾರ ಮೇಳ’ವನ್ನು ಆಯೋಜಿಸಲಾಗಿದೆ. ಈ ಕುರಿತು ಇಂದು ಕಳೂರು ಸೊಸೈಟಿಯ ಅಧ್ಯಕ್ಷರಾದ ವಿನಯ್ ಕುಮಾರ್ ದುಮ್ಮ ಹಾಗೂ ಕಾರ್ಯಕ್ರಮದ ಪ್ರಮುಖ ರೂವಾರಿ, ರಾಜರತ್ನ ಇವೆಂಟ್ಸ್ ಹಾಗೂ ಜನಸ್ನೇಹಿ ಇವೆಂಟ್ಸ್‌ನ ಪ್ರಭಾಕರ್ ಮಂದಾರ್ತಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮೇಳದ ಸಂಪೂರ್ಣ ರೂಪರೇಷೆಗಳನ್ನು ಹಂಚಿಕೊಂಡರು.


ಈ ಮೇಳದಲ್ಲಿ ವಿವಿಧ ಬಗೆಯ ಹಲಸಿನ ಹಣ್ಣುಗಳು ಮತ್ತು ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ. ಇದರ ಜೊತೆಗೆ ರೈತರಿಗೆ ಅನುಕೂಲವಾಗುವಂತೆ ಬರೋಬ್ಬರಿ 1 ಲಕ್ಷ ಹಲಸಿನ ಸಸಿಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ತರಕಾರಿ ಬೀಜಗಳು ಮತ್ತು ಇತರೆ ಹಣ್ಣಿನ ಗಿಡಗಳೂ ನರ್ಸರಿ ಮಳಿಗೆಗಳಲ್ಲಿ ಲಭ್ಯವಿರಲಿವೆ. ಹಲಸಿನ ಹಣ್ಣಿನಿಂದ ತಯಾರಿಸಿದ ಹಪ್ಪಳ, ಪಾಯಸ, ಹೋಳಿಗೆ, ಚಿಪ್ಸ್ ಮಾತ್ರವಲ್ಲದೇ, ವಿಭಿನ್ನವಾದ ಹಲಸಿನ ಬಿರಿಯಾನಿ ಮತ್ತು ಐಸ್‌ಕ್ರೀಮ್ ಸೇರಿದಂತೆ ನೂರಾರು ಬಗೆಯ ತಿನಿಸುಗಳು ಈ ಆಹಾರ ಮೇಳದಲ್ಲಿ ಲಭ್ಯವಿರಲಿವೆ.

ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸಲು ಗುಡಿ ಕೈಗಾರಿಕೆ ಮತ್ತು ಸ್ವದೇಶಿ ವಸ್ತುಗಳ ಮೇಳವನ್ನು ಆಯೋಜಿಸಲಾಗಿದೆ. ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಯುರ್ವೇದಿಕ ಉತ್ಪನ್ನಗಳು, ಉಪ್ಪಿನಕಾಯಿ, ರಾಜಸ್ಥಾನಿ ಉತ್ಪನ್ನಗಳು, ಬಟ್ಟೆ ಮತ್ತು ಗೃಹಬಳಕೆಯ ವಸ್ತುಗಳ ಮಳಿಗೆಗಳೂ ಇರಲಿವೆ. ಮೇಳದ ಮತ್ತೊಂದು ವಿಶೇಷತೆಯೆಂದರೆ, ಸಾರ್ವಜನಿಕರು ತಮ್ಮ ಹಳೆಯ ಜರಿ ಸೀರೆಗಳನ್ನು ತಂದು ಮೌಲ್ಯಮಾಪನ ಮಾಡಿಸಿ, ಸ್ಥಳದಲ್ಲಿಯೇ ಅದಕ್ಕೆ ತಕ್ಕ ನಗದನ್ನು ಪಡೆಯುವ ವಿಶೇಷ ಕೌಂಟರ್ ಅನ್ನು ಸಹ ತೆರೆಯಲಾಗಿದೆ.
ಜುಲೈ 03 ಶುಕ್ರವಾರದಂದು ಮಳಿಗೆಗಳನ್ನು ಸಜ್ಜುಗೊಳಿಸುವ ಕಾರ್ಯವಿರುವುದರಿಂದ ಮೇಳವು ಮಧ್ಯಾಹ್ನ 1:00 ಗಂಟೆಗೆ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಮಧ್ಯಾಹ್ನ 2:00 ರಿಂದ 4:00 ಗಂಟೆಯ ನಡುವೆ ಕಾರ್ಯಕ್ರಮದ ಅಧಿಕೃತ ಉದ್ಘಾಟನೆ ನಡೆಯಲಿದೆ. ಜುಲೈ 04 ಶನಿವಾರದಂದು ಬೆಳಿಗ್ಗೆ 9:30 ರಿಂದ ರಾತ್ರಿ 9:30 ರವರೆಗೆ ಮೇಳ ನಡೆಯಲಿದೆ. ಜುಲೈ 05 ಭಾನುವಾರ ರಜಾ ದಿನವಾದ್ದರಿಂದ ಹೆಚ್ಚಿನ ಜನದಟ್ಟಣೆ ನಿರೀಕ್ಷಿಸಲಾಗಿದ್ದು, ಅಂದು ಬೆಳಿಗ್ಗೆ 8:30 ರಿಂದಲೇ ಮೇಳ ಆರಂಭವಾಗಿ ರಾತ್ರಿ 10:00 ಗಂಟೆಯವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜರತ್ನ ಇವೆಂಟ್ಸ್ ಹಾಗೂ ಜನಸ್ನೇಹಿ ಇವೆಂಟ್ಸ್‌ನ ಪ್ರಭಾಕರ್ ಮಂದಾರ್ತಿ, ಈ ಮೇಳವು ಕೇವಲ ವಾಣಿಜ್ಯ ಉದ್ದೇಶ ಹೊಂದಿಲ್ಲ, ಬದಲಾಗಿ ಮಲೆನಾಡು ಭಾಗದಲ್ಲಿ ಮಳೆಗಾಲದ ಸಮಯದಲ್ಲಿ ಸ್ಥಳೀಯ ಕುಟುಂಬಗಳಿಗೆ, ಗುಡಿ ಕೈಗಾರಿಕೆ ನಡೆಸುವವರಿಗೆ ಮತ್ತು ರೈತರಿಗೆ ಆರ್ಥಿಕವಾಗಿ ವೇದಿಕೆ ಕಲ್ಪಿಸುವ ಸಾಮಾಜಿಕ ಕಳಕಳಿಯಿಂದ ಇದನ್ನು ಆಯೋಜಿಸಲಾಗಿದೆ ಎಂದರು. ಕಳೂರು ಸೊಸೈಟಿಯ ಅಧ್ಯಕ್ಷರಾದ ವಿನಯ್ ಕುಮಾರ್ ದುಮ್ಮ ಅವರ ವಿಶೇಷ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದ್ದು, ಜೆಸಿಐ, ವಿವಿಧ ಬ್ಯಾಂಕ್‌ಗಳು, ವರ್ತಕರ ಸಂಘ, ಕೃಷಿ ಇಲಾಖೆ ಹಾಗೂ ಸುಮಾರು 15ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಕೈಜೋಡಿಸಿವೆ ಎಂದು ತಿಳಿಸಿದರು. ಕಳೂರು ಸೊಸೈಟಿ ಅಧ್ಯಕ್ಷರಾದ ವಿನಯ್ ಕುಮಾರ್ ದುಮ್ಮ ಅವರು ಮಾತನಾಡಿ, ಹೊಸನಗರದ ಜನತೆ ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮೇಳದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾಟಗೋಡು ಸುರೇಶ್, ಸುಮೇದ ಸೋಸೈಟಿ ಅಧ್ಯಕ್ಷರು, ಮತ್ತಿಮನೆ ಶಾರದ ಸೌಹಾರ್ದ ಉಪಾಧ್ಯಕ್ಷರಾದ ರಮಾಕಾಂತ್, ವರ್ತಕರ ಸಂಘದ ಅಧ್ಯಕ್ಷರಾದ ಪೂರ್ಣೇಶ್, ಜೆಸಿ ಕೊಡಚಾದ್ರಿ ಅಧ್ಯಕ್ಷರಾದ ಸಂತೋಷ್ ಶೆಟ್, ತುಂಗಾ ಅಡಿಕೆ ಮಂಡಿ ನಿರ್ದೇಶಕರಾದ ಚಕ್ಕಾರ್ ವಿನಾಯಕ್, ಜೆಸಿ ಡೈಮಂಡ್ ಅಧ್ಯಕ್ಷರಾದ ಸಂದೀಪ್ ಹಾಗೂ ಸುಮೇದ ಸೋಸೈಟಿ ಕಾರ್ಯದರ್ಶಿ ಪ್ರಕಾಶ್ ಉಪಸ್ಥಿತರಿದ್ದರು.
ಬರಹ: Chetandas Hosamane









