Hosanagara: ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಬಿಇಓಗೆ ಶಿಕ್ಷಕರ ಸಂಘ ಮನವಿ

Photo of author

By vishwachetana807@gmail.com

ಪುಟ್ಟಸ್ವಾಮಿ ನೇತೃತ್ವದಲ್ಲಿ ಬಿಇಓಗೆ ಶಿಕ್ಷಕರ ಸಂಘದಿಂದ ಮನವಿ – 30 ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಹೊಸನಗರ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಎದುರಿಸುತ್ತಿರುವ ಸೇವಾ, ಆಡಳಿತಾತ್ಮಕ, ತಾಂತ್ರಿಕ ಹಾಗೂ ಇತರೆ ದೈನಂದಿನ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (ರಿ) ಹೊಸನಗರ ತಾಲೂಕು ಶಾಖೆಯ ವತಿಯಿಂದ ಅಧ್ಯಕ್ಷರಾದ ಪುಟ್ಟಸ್ವಾಮಿ ಕೆ.ಜೆ ನೇತೃತ್ವದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಣೇಶ್ ವೈ ಅವರಿಗೆ ಸುದೀರ್ಘ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಪುಟ್ಟಸ್ವಾಮಿ ಕೆ.ಜೆ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಪ್ಪ ಹೆಚ್.ಸಿ. ಹಡತ್ರಿ ಅವರ ನೇತೃತ್ವದ ನಿಯೋಗವು ಬಿಇಓ ಅವರನ್ನು ಭೇಟಿಯಾಗಿ, ಶಿಕ್ಷಕರ ಪರವಾಗಿ ಒಟ್ಟು 30 ಪ್ರಮುಖ ಬೇಡಿಕೆಗಳನ್ನು ಇಲಾಖೆಯ ಮುಂದಿಟ್ಟು ತ್ವರಿತ ಪರಿಹಾರಕ್ಕೆ ಒತ್ತಾಯಿಸಿದೆ.

ಬಾಕಿ ಇರುವ ಶಿಕ್ಷಕರ ಮೆಡಿಕಲ್ ಬಿಲ್ಲುಗಳ ವಿಲೇವಾರಿ ಹಾಗೂ 10, 15, 20 ಮತ್ತು 25 ವರ್ಷಗಳ ಕಾಲಮಿತಿ ವೇತನ ಬಡ್ತಿಗಳನ್ನು ಶೀಘ್ರವಾಗಿ ಮಂಜೂರು ಮಾಡಬೇಕು. 2016 ಹಾಗೂ 2024ರಲ್ಲಿ ನೇಮಕವಾದ ಜಿಪಿಟಿ (GPT) ಶಿಕ್ಷಕರ ಸೇವಾ ಸಮಸ್ಯೆಗಳನ್ನು ಬಗೆಹರಿಸಿ, ಕಾಯಂ ಪೂರ್ವ ಸೇವಾ ಅವಧಿ ಪೂರ್ಣಗೊಂಡ ಬಗ್ಗೆ ಪ್ರಮಾಣ ಪತ್ರ ನೀಡಬೇಕು. ತರಬೇತಿ ಪಡೆದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡುವುದು ಹಾಗೂ ಬಾಕಿ ಟಿಎ/ಡಿಎ (TA/DA) ಹಣ ಪಾವತಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಜೊತೆಗೆ, HRMS ತಂತ್ರಾಂಶದಲ್ಲಿ ಶಿಕ್ಷಕರ ವಿವರಗಳ ತಿದ್ದುಪಡಿ ಹಾಗೂ KAAMS ಆಪ್‌ನಲ್ಲಿ ಹಾಜರಾತಿ ಹಾಕುವಾಗ ಕಾಡುತ್ತಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು, ಮತ್ತು KASS, ನಿರಂತರ ಆಪ್ ಹಾಗೂ SATS ತಂತ್ರಾಂಶದ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ ಆನ್‌ಲೈನ್ ಕೆಲಸದ ಒತ್ತಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಮಕ್ಕಳಿಗೆ ಶೂ ಮತ್ತು ಸಾಕ್ಸ್ ಅಳತೆ ತೆಗೆದುಕೊಳ್ಳಲು ನುರಿತ ವ್ಯಕ್ತಿಗಳನ್ನು ಕಳುಹಿಸಿಕೊಡಬೇಕು ಮತ್ತು ಇವುಗಳನ್ನು ಶಾಲೆಗೆ ಸಾಗಿಸಲು ಇಲಾಖೆಯೇ ವ್ಯವಸ್ಥೆ ಮಾಡಬೇಕು. ಬಿಸಿಯೂಟ ಯೋಜನೆಯ ಆರ್ಥಿಕ ಹಾಗೂ ಮಾನಸಿಕ ಹೊರೆಯನ್ನು ಶಿಕ್ಷಕರಿಂದ ತಪ್ಪಿಸಿ, ಅದನ್ನು ಸರ್ಕಾರೇತರ ಸಂಸ್ಥೆಗಳಿಗೆ (NGOs) ವಹಿಸಿಕೊಡಬೇಕು. ದಿನಸಿ ಹಾಗೂ ಅಗತ್ಯ ಸಾಮಗ್ರಿಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಲು ಅನುದಾನ ನೀಡಬೇಕು ಹಾಗೂ ಕಳೆದ ವರ್ಷದಂತೆ ಹೋಬಳಿ ಮಟ್ಟದಲ್ಲಿ ಮಾಡದೆ, ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಕ್ಲಸ್ಟರ್ ಮಟ್ಟದಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ಮುಂಬರುವ ದಿನಗಳಲ್ಲಿ ಆರಂಭವಾಗಲಿರುವ ‘ಸಿರ್’ (SIR) ಮನೆಮನೆ ಸಮೀಕ್ಷೆ ವೇಳೆ, ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಮಹಿಳಾ ಶಿಕ್ಷಕಿಯರು ಒಂಟಿಯಾಗಿ ತೆರಳುವುದು ಅಪಾಯಕಾರಿಯಾಗಿದ್ದು, ಅವರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಅಥವಾ ಗ್ರಾಮ ಆಡಳಿತಾಧಿಕಾರಿಗಳನ್ನು ಕಳುಹಿಸಿಕೊಡಬೇಕು. ಶಿಕ್ಷಕರನ್ನು ಕೇವಲ ಬೋಧನೆಗೆ ಮಾತ್ರ ಸೀಮಿತಗೊಳಿಸಿ, ಇತರೆ ಬೋಧನೇತರ ಕೆಲಸಗಳಿಂದ ಮುಕ್ತಗೊಳಿಸಬೇಕು. ಹಾಗೆಯೇ, ಶಿಕ್ಷಕರು ರಜೆ (EL/CL) ಪಡೆಯಲು ವಾಟ್ಸಾಪ್ ಮೂಲಕವೇ ಸಿಆರ್‌ಪಿ ಅವರಿಗೆ ಅರ್ಜಿ ಸಲ್ಲಿಸುವ ಸರಳ ಪದ್ಧತಿಯನ್ನು ಜಾರಿಗೆ ತರಬೇಕು. ಶಿಕ್ಷಕರು ಯಾವುದೇ ಮಾನಸಿಕ ಒತ್ತಡವಿಲ್ಲದೆ, ಶಾಲೆಯಲ್ಲಿ ಬೋಧನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಈ ಎಲ್ಲಾ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಡಬೇಕು ಎಂದು ಪುಟ್ಟಸ್ವಾಮಿ ಕೆ.ಜೆ ನೇತೃತ್ವದಲ್ಲಿ ನಿಯೋಗವು ಬಿಇಓ ಅವರನ್ನು ವಿನಂತಿಸಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಕೆ.ಜಿ, ಕಾರ್ಯದರ್ಶಿ ಶಿವಪ್ಪ ಹೆಡತ್ರಿ, ಬಸವಣ್ಯಪ್ಪ. M, ಮೋಹನ್ ಕುಮಾರ್, ರವಿಕುಮಾರ್, ಧನಂಜಯ್ ಹಾಗೂ ಇತರರು ಉಪಸ್ಥಿತರಿದ್ದರು.

ಬರಹ: Chetandas Hosamane

Leave a Comment