ಹೊಸನಗರ: 9 ವರ್ಷದ ಬಾಲಕನ ಸಾಹಸ: ಫಿಟ್ಸ್ ಬಂದು ಹೊಳೆಗೆ ಬಿದ್ದ ತಂದೆಯನ್ನು ಕಾಪಾಡಿದ ಜಾಣ ಮಗನಿಗೆ ಅಧಿಕಾರಿಗಳಿಂದ ಸನ್ಮಾನ!

Photo of author

By vishwachetana807@gmail.com

 

ಹೊಸನಗರ ತಾಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಗೋಡು ಗ್ರಾಮದಲ್ಲಿ ಧೈರ್ಯಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು 9 ವರ್ಷದ ಬಾಲಕ ನಂದನ್ ಜಿ.ಸಿ ಸಾಬೀತುಪಡಿಸಿದ್ದಾನೆ. ನಂದನ್ ಹಾಗೂ ತಂದೆ ಚಂದ್ರು ಗೋರಗೋಡು ಸಮೀಪದ ಹೊಳೆಯ ಬಳಿ ತೆರಳಿದ್ದಾಗ ಚಂದ್ರು ಅವರಿಗೆ ಏಕಾಏಕಿ ಫಿಟ್ಸ್ ಬಂದು ಜಾರಿ ಹೊಳೆಗೆ ಬಿದ್ದು, ಹರಿಯುವ ನೀರಿನೊಂದಿಗೆ ಸುಮಾರು 2 ಕಿಲೋಮೀಟರ್ ದೂರ ತೇಲಿ ಹೋಗಿದ್ದಾರೆ. ಈ ದೃಶ್ಯಕಂಡು ಗಾಬರಿಗೊಳ್ಳದ ನಂದನ್, ಹೊಳೆಯ ದಡದ ಉದ್ದಕ್ಕೂ 2 ಕಿಲೋಮೀಟರ್ ಓಡಿ ತಂದೆಯನ್ನು ಹುಡುಕಿದ್ದಾನೆ. ಬಳಿಕ ಸಮೀಪದ ಮನೆಗಳಿಗೆ ಧಾವಿಸಿ ಸ್ಥಳೀಯರ ನೆರವು ಕೋರಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಗ್ರಾಮಸ್ಥರಲ್ಲಿ ಹೊಳೆಯಲ್ಲಿ ತೇಲುತ್ತಿದ್ದ ಜರ್ಕಿನ್‌ನ್ನು ಗುರುತಿಸಿ ಅದೇ ಸ್ಥಳದಲ್ಲಿ ತಂದೆ ಇರಬಹುದೆಂದು ನಂದನ್ ತಿಳಿಸಿದ್ದು, ಸ್ಥಳೀಯರು ಚಂದ್ರು ಅವರನ್ನು ದಡಕ್ಕೆ ಎಳೆದು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

 

​ತಂದೆ ಅಪಾಯದಲ್ಲಿದ್ದಾಗ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ನಡೆದುಕೊಂಡ ನಂದನ್ ಸಾಹಸವನ್ನು ಗುರುತಿಸಿ ಗೋರಗೋಡು ಶಾಲೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಹೊಸನಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಣೇಶ್, ನೌಕರರ ಸಂಘದ ಅಧ್ಯಕ್ಷರಾದ ಸೋಮಶೇಖರ ಬಂಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಪುಟ್ಟಸ್ವಾಮಿ ಕೆ ಜಿ ಕಾರ್ಯದರ್ಶಿ ಶಿವಪ್ಪ H. C ,ಗುರುಮೂರ್ತಿ ಮತ್ತು ವಿ.ಡಿ ನಾಗರಾಜ್ ಉಪಸ್ಥಿತರಿದ್ದರು.

ಬರಹ: Chetandas Hosamane

Leave a Comment