ಶಾಸಕ ಬೇಳೂರು ವಿರುದ್ಧದ ಹಾಲಪ್ಪ ಆರೋಪ ಆಧಾರರಹಿತ: ಚಂದ್ರಮೌಳಿ ತಿರುಗೇಟು

ಹೊಸನಗರ: ಕೇಂದ್ರದ ಬಿಜೆಪಿ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ತರಲು ರಾಜ್ಯ ಪಶ್ಚಿಮಘಟ್ಟದ ಮಲೆನಾಡು ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಮೂರನೇ ಬಾರಿಗೆ ಅಧಿಸೂಚನೆ ಹೊರಡಿಸಿದೆ. ಈ ಪ್ರಕ್ರಿಯೆ 2013ರಿಂದ ಆರಂಭಗೊಂಡಿದ್ದು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಈ ಕುರಿತು ವಿಶೇಷ ಸಮಿತಿ ರಚಿಸಿ ರಾಜ್ಯದ ಮಲೆನಾಡು ಭಾಗದ ಪಶ್ಚಿಮಘಟ್ಟದ ವ್ಯಾಪ್ತಿಗೆ ಬರುವ ಸುಮಾರು ಐದು ಸಾವಿರ ಗ್ರಾಮಗಳನ್ನು ಈ ವರದಿಯಿಂದ ಕೈ ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅಲ್ಲದೆ, ಕಸ್ತೂರಿ ರಂಗನ್ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಗಳಿಂದ ಸ್ಥಳೀಯ ಗ್ರಾಮಸಭೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ವರದಿ ಕೈ ಬಿಡುವಂತೆ ಮನವಿ ಸಲ್ಲಿಸಲಾಗಿತ್ತು. ಆದರೂ, ಇತ್ತೀಚೆಗೆ ವರದಿ ಜಾರಿಗೊಳಿಸಲು ಅಧಿಸೂಚನೆ ಹೊರಡಿಸಿರುವ ಕ್ರಮವನ್ನು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ತಿಳಿಸಿದರು.


ಪಟ್ಟಣದ ಗಾಂಧಿಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಜಾರಿಗೆ ಬಂದಲ್ಲಿ ಇದು ಮಲೆನಾಡು ಭಾಗದ ಜನರ ಬದುಕಿಗೆ ಮರಣಶಾಸನ ಬರೆದಂತೆ ಆಗಲಿದೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದರು. ವರದಿ ಜಾರಿಗೊಂಡಲ್ಲಿ ಜಾನುವಾರು ಮೇಯಿಸಲು ಸಾಧ್ಯವಾಗದು. ಈ ಪ್ರದೇಶದಲ್ಲಿ ಯಾವುದೇ ಯಂತ್ರೋಪಕರಣ, ಕೈಗಾರಿಕೆಗಳ ಅನುಷ್ಠಾನಕ್ಕೆ ಅನುಮತಿ ದೊರೆಯದು. ವಿವಿಧ ಜನಪರ ಅಭಿವೃದ್ಧಿ ಕಾರ್ಯಗಳಿಗೆ ವರದಿ ಮಾರಕವಾಗಲಿದೆ. ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಿದ್ದೇ ಆದಲ್ಲಿ ಪಶ್ಚಿಮಘಟ್ಟ ಪ್ರದೇಶದ ಜನರು ಭಾರಿ ವಿರೋಧ ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದರು.
ವರದಿ ಕುರಿತು ಜನರು ಇ-ಮೇಲ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂಬ ಕೇಂದ್ರ ಸರ್ಕಾರದ ನೀತಿಯೂ ಮಲೆನಾಡಿನ ಕುಗ್ರಾಮದ ಅವಿದ್ಯಾವಂತ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಲಪ್ಪ ಆರೋಪದಲ್ಲಿ ಹುರುಳಿಲ್ಲಇತ್ತೀಚೆಗೆ ಮಾಜಿ ಸಚಿವ ಹರತಾಳು ಹಾಲಪ್ಪ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಕುರಿತಂತೆ ನೀಡಿರುವ ವಿವಿಧ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇದೆಲ್ಲ ಕಪೋಲಕಲ್ಪಿತವಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದರು. ಕಳೆದ ಮೂರ್ನಾಲ್ಕು ತಿಂಗಳಿಂದ ಶಾಸಕ ಬೇಳೂರು ಕ್ಷೇತ್ರದ ಜನರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ಬೆಂಗಳೂರಿನಿಂದಲೇ ತಮ್ಮ ಆಪ್ತ ಸಹಾಯಕರು, ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರೊಡನೆ ಅವರು ನಿರಂತರ ಸಂಪರ್ಕದಲ್ಲಿದ್ದು, ಇತ್ತೀಚಿನ ಮಳೆಹಾನಿ, ಬೆಳೆಹಾನಿ ಸೇರಿದಂತೆ ಹಲವು ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ, ನೊಂದವರಿಗೆ ಕೈಲಾದ ಸಹಕಾರ ನೀಡಿದ್ದಾರೆ. ಸಚಿವರಾಗುವ ಅವಕಾಶ ಇದ್ದ ಕಾರಣ ಬೇಳೂರು ಬೆಂಗಳೂರಿನಲ್ಲಿದ್ದರೂ ಕ್ಷೇತ್ರದ ಸಮಗ್ರ ಕಾರ್ಯಗಳ ಕುರಿತು ಸದಾ ಗಮನ ಹರಿಸಿದ್ದರು.
ಆದರೆ, ಮೂರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಹರತಾಳು ಹಾಲಪ್ಪ ಇಂತಹ ಆಧಾರ ರಹಿತ ಹೇಳಿಕೆಗಳು ಅವರ ಘನತೆಗೆ ಶೋಭೆ ತರದು ಎಂದರು. ಶಾಸಕ ಬೇಳೂರು ಅವರ ಕಾರ್ಯಕ್ಷಮತೆಯನ್ನು ಯಾರೂ ಪ್ರಶ್ನೆ ಮಾಡುವಂತೆಯೇ ಇಲ್ಲ ಎಂದ ಚಂದ್ರಮೌಳಿ, ಬೇಳೂರು ಸಚಿವರಾಗುತ್ತಾರೆ ಎಂಬ ಮಾತನ್ನು ಹರತಾಳು ಹಾಲಪ್ಪರಿಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಹಾಲಪ್ಪ ನಡೆಗೆ ಕಿಡಿಕಾರಿದರು.
ಭಾರತ್ ಜೋಡೋ ಪಕ್ಷಾತೀತವಾದುದುರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಭಾರತ್ ಜೋಡೋ ಯುವಕ ಸಂಘ’ ಸ್ಥಾಪನೆಯ ಮೂಲಕ ಗ್ರಾಮೀಣ ಭಾಗದ ಯುವಶಕ್ತಿಗಳ ಸಂಘಟನೆಗಾಗಿ 16 ರಿಂದ 45 ವಯೋಮಿತಿಯ ಒಳಗಿನ ಯುವಕರ ಸಂಘಗಳ ಸಾಂಸ್ಕೃತಿಕ, ಜಾನಪದ, ಕ್ರೀಡೆ ಸೇರಿದಂತೆ ಸಂಘಟನಾತ್ಮಕ ಚಟುವಟಿಕೆಗಳಿಗೆ ತಲಾ ರೂ 10 ಲಕ್ಷ ನೀಡಲು ಉದ್ದೇಶಿಸಿದೆ. ಆಗಸ್ಟ್ 6ರಿಂದ ಸದಸ್ಯತ್ವ ನೋಂದಣಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಇದೊಂದು ಪಕ್ಷಾತೀತ ನಡೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಭಾಕರ್, ಸದಾಶಿವ ಶೆಟ್ಟಿ, ಚಿದಂಬರ, ಜಯಶೀಲಪ್ಪಗೌಡ, ಹೊಳೆಯಪ್ಪ, ಎಂ.ಪಿ.ಸುರೇಶ್, ಇಕ್ಬಾಲ್, ಉಬೇದ್, ಗಣೇಶ್, ಲೋಕೇಶ್ ಮಂಡಾನಿ, ಆಶ್ರಯ ಸಮಿತಿ ಸದಸ್ಯೆ ರಾಧಿಕಾ ಶೆಟ್ಟಿ ಹಾಜರಿದ್ದರು.
ಬರಹ: Chetandas Hosamane ವರದಿ ಶ್ರೀಕಂಠ ಹೊಸನಗರ









