ಸಂತ್ರಸ್ತರಿಗೆ ಹೊಸ ನಿವೇಶನ, ಮನೆ ನಿರ್ಮಾಣ ಹಾಗೂ ತಾತ್ಕಾಲಿಕ ಬಾಡಿಗೆ ನೆರವಿನ ಭರವಸೆ; ಕರ್ತವ್ಯ ಲೋಪವಾದರೆ ಕಠಿಣ ಕ್ರಮಕ್ಕೆ ಸಚಿವರ ಎಚ್ಚರಿಕೆ.

ತೀರ್ಥಹಳ್ಳಿ: ತಡೆಗೋಡೆ ಕುಸಿದು ಮೂವರು ಸಾವನ್ನಪ್ಪಿದ ದುರಂತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.
ಅನಾಹುತದಿಂದ ಮನೆ ಕಳೆದುಕೊಂಡವರಿಗೆ ಅದೇ ಜಾಗದಲ್ಲಿ ಮತ್ತೆ ಮನೆ ನಿರ್ಮಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ, ಸುರಕ್ಷಿತ ಪ್ರದೇಶದಲ್ಲಿ ಪರ್ಯಾಯ ನಿವೇಶನ ಒದಗಿಸಿ ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡಲಾಗುವುದು. ಮನೆ ನಿರ್ಮಾಣಕ್ಕೆ ಸುಮಾರು 4ರಿಂದ 6 ತಿಂಗಳು ಬೇಕಾಗಬಹುದಾಗಿದ್ದು, ಅಲ್ಲಿಯವರೆಗೆ ಸಂತ್ರಸ್ತರು ತಾತ್ಕಾಲಿಕವಾಗಿ ವಾಸಿಸಲು ಅಗತ್ಯವಿರುವ ಬಾಡಿಗೆಯನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವರು ತಿಳಿಸಿದರು.


ಕಷ್ಟದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ, ವಿಶೇಷವಾಗಿ ಕುಟುಂಬದ ಹೆಣ್ಣುಮಕ್ಕಳಿಗೆ ಧೈರ್ಯ ತುಂಬುವ ಅಗತ್ಯವಿದೆ ಎಂದ ಅವರು, ತಮ್ಮ ವೈಯಕ್ತಿಕ ನೆಲೆಯಲ್ಲಿ ₹1 ಲಕ್ಷ ಹಾಗೂ ಯುವಕರ ಪಡೆಯ ವತಿಯಿಂದ ಒಟ್ಟು ₹5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.
ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಅಪಾಯದ ಕುರಿತು ತಹಶೀಲ್ದಾರ್ ಅವರು ಮೊದಲೇ ಮುನ್ನೆಚ್ಚರಿಕೆ ನೀಡಿದ್ದರೇ? ನೀಡಿದ್ದರೆ ಅದು ಲಿಖಿತ ರೂಪದಲ್ಲಿತ್ತೇ? ಎಂಬುದನ್ನು ಅಧಿಕಾರಿಗಳ ಸಭೆ ನಡೆಸಿ ದಾಖಲೆಗಳ ಮೂಲಕ ಪರಿಶೀಲಿಸಲಾಗುವುದು. ಕರ್ತವ್ಯ ಲೋಪ ಅಥವಾ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಕಂಡುಬಂದರೆ, ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಅವರು ಕೂಡ ಘಟನಾ ಸ್ಥಳಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ. ಪ್ರಸ್ತುತ ಭೂವಿಜ್ಞಾನಿಗಳು ಸ್ಥಳದಲ್ಲಿ ಅಧ್ಯಯನ ನಡೆಸುತ್ತಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಆ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.
ಹವಾಮಾನ ವೈಪರೀತ್ಯದಿಂದ ಗುಡ್ಡಗಾಡು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರದೇಶಗಳಲ್ಲಿ ಇಂತಹ ಅನಾಹುತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವೈಜ್ಞಾನಿಕ ಆಧಾರದ ಮೇಲೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸದ್ಯ ಮುಖ್ಯಮಂತ್ರಿ ದೆಹಲಿ ಪ್ರವಾಸದಲ್ಲಿದ್ದು, ಅವರು ವಾಪಸ್ ಬಂದ ಬಳಿಕ ತಜ್ಞರ ವರದಿಗಳ ಕುರಿತು ಚರ್ಚಿಸಿ, ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರದ ಗಮನಕ್ಕೂ ತಂದು ಮುಂದಿನ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕ ಆರಗ ಜ್ಞಾನೇಂದ್ರ, ಆದರ್ಶ್ ಹುಂಚದಕಟ್ಟೆ, ಮೂಡಬ ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬರಹ: Chetandas Hosamane









