ಮಲೆನಾಡಿನ ಪ್ರಕೃತಿ, ಸಂಸ್ಕೃತಿ ಹಾಗೂ ಸಾಹಿತ್ಯದ ನಡುವಿನ ಅವಿನಾಭಾವ ನಂಟಿನ ಕುರಿತು ವಿಶೇಷ ಉಪನ್ಯಾಸ

ಹೊಸನಗರ: ದತ್ತಿ ದಾನಿಗಳು ನೀಡಿರುವ ಕೊಡುಗೆಯನ್ನು ಸಾಹಿತ್ಯ ಪರಿಷತ್ತು ಸಾಹಿತ್ಯ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ. ಶಾಂತರಾಮ ಪ್ರಭು ಸಲಹೆ ನೀಡಿದರು.
ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಕೊಡಿಗೆ ಗ್ರಾಮದಲ್ಲಿ ಕಸಾಪ ಪಂಪ ಜಯಂತಿ ಅಂಗವಾಗಿ ಶ್ರೀ ರಾಮಚಂದ್ರಪುರ ಮಠ ಹಾಗೂ ಹುಂಚ ಜೈನ ಮಠದ ವತಿಯಿಂದ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.


ಮಲೆನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಗೂ ಇಲ್ಲಿನ ಪರಿಸರಕ್ಕೂ ವಿಶೇಷ ನಂಟಿದೆ. ಹೀಗಾಗಿ ಮಲೆನಾಡಿನ ಪ್ರಕೃತಿ ಹಾಗೂ ಸಾಹಿತ್ಯದ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆಷಾಢ ಮಾಸದ ಗುರು ಪೂರ್ಣಿಮೆಯಂದು ಗುರು ಕಾಣಿಕೆ ನೀಡಿ ಗುರುಗಳ ಆಶೀರ್ವಾದ ಪಡೆಯುವುದು ನಮ್ಮ ಸಂಪ್ರದಾಯ. ಇದರ ಹಿಂದಿರುವ ವೈಶಿಷ್ಟ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಚಾತುರ್ಮಾಸದ ಮಹತ್ವದ ಬಗ್ಗೆಯೂ ಅವರು ವಿವರಿಸಿದರು.
ನಂತರ ಆಸಕ್ತ ಗ್ರಾಮಸ್ಥರೊಂದಿಗೆ ಕಗ್ಗ, ಭಗವದ್ಗೀತೆ ಹಾಗೂ ಉಪನಿಷತ್ತುಗಳ ಕುರಿತು ಸಂವಾದ ನಡೆಯಿತು.
ಯಕ್ಷಕಲಾವಿದ ಪುರಂದರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಲೆತಲೆಮಾರುಗಳ ನಡುವಿನ ಮನಸ್ಥಿತಿಯ ಅಂತರವನ್ನು ವಿವರಿಸಿದರು. ಇದು ಕಹಿ ಸತ್ಯವಾದರೂ ಒಪ್ಪಿಕೊಳ್ಳಲೇಬೇಕಾಗಿದೆ ಎಂದರು.
ಕಲಾನಾಥೇಶ್ವರ ದೇವಸ್ಥಾನದ ಕಾರ್ಯದರ್ಶಿ ಎನ್.ಡಿ. ರವಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ನಾಗರಕೊಡಿಗೆ ಗಣೇಶಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ತಾಲೂಕಿನ ಎಲ್ಲಾ ಪಿಯು ಕಾಲೇಜುಗಳಲ್ಲಿ ದತ್ತಿನಿಧಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಯುವಜನತೆಗೆ ಸಾಹಿತ್ಯದ ಅಗತ್ಯತೆ ತಿಳಿಸಿ, ಅವರಲ್ಲಿ ಸಾಹಿತ್ಯಾಸಕ್ತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಎಸ್. ರಾಘವೇಂದ್ರ, ರಮಾ ದಿವಾಕರ್, ಮಾಲಿನಿ ಸದಾನಂದ, ಲಾಗದಮನೆ ರಾಮಸ್ವಾಮಿ ರವಿ, ಸತ್ಯನಾರಾಯಣ ಆಚಾರ್, ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವೀಣಾ ಮೂರ್ತಿ ಸ್ವಾಗತಿಸಿದರು. ಗೀತಾ ಚಂದ್ರಶೇಖರ್ ಪ್ರಾರ್ಥಿಸಿದರು. ಶಿವಾನಂದಪ್ಪ ನಿರೂಪಿಸಿದರು. ನಾಗರಕೊಡಿಗೆ ಶಶಿ ವಂದಿಸಿದರು.
ಬರಹ: Chetandas Hosamane









