ಬೇಂದ್ರೆ ಸಾಹಿತ್ಯ ವಿದ್ಯಾರ್ಥಿಗಳ ಬದುಕಿಗೆ ಜ್ಞಾನ ಮತ್ತು ಸ್ಫೂರ್ತಿ ನೀಡುತ್ತದೆ: ಕೃತಿಗಳ ಓದಿಗೆ ಉಪನ್ಯಾಸಕ ರವಿ ಸಲಹೆ

ಹೊಸನಗರ: ವರಕವಿ ದ.ರಾ. ಬೇಂದ್ರೆ ಓರ್ವ ಶ್ರೇಷ್ಠ ಸಾಹಿತಿಯಾಗಿದ್ದು, ಶಬ್ದಗಳ ಮೂಲಕ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಶಬ್ದ ಗಾರುಡಿಗ ಎಂದು ಉಪನ್ಯಾಸಕ ರವಿ ಹೇಳಿದರು.
ಪಟ್ಟಣದ ಹೋಲಿ ರಿಡೀಮರ್ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿದಾನಿಗಳಾದ ಡಾ. ಮಾರ್ಷಲ್ ಶರಾಂ ಮತ್ತು ಚಂದ್ರಶೇಖರ ಶೇಟ್ ಅವರ ದತ್ತಿನಿಧಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ‘ವರಕವಿ ದ.ರಾ. ಬೇಂದ್ರೆ ಅವರ ಬದುಕು–ಬರಹ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಬೇಂದ್ರೆಯವರ ಕವಿತೆಗಳು ಹಾಡುವಾಗ ಲಯಬದ್ಧವಾಗಿ ಅತ್ಯುತ್ತಮ ಗೀತೆಗಳಾಗಿ ರೂಪುಗೊಳ್ಳುತ್ತವೆ. ಅವರು ಅಪರೂಪದ ಸಾಹಿತಿಯಾಗಿದ್ದು, ವಿದ್ಯಾರ್ಥಿಗಳು ಬೇಂದ್ರೆಯವರ ಸಾಹಿತ್ಯ ಕೃತಿಗಳನ್ನು ಅಗತ್ಯವಾಗಿ ಓದಬೇಕು ಎಂದು ಸಲಹೆ ನೀಡಿದರು.ಸಂಪನ್ಮೂಲ ವ್ಯಕ್ತಿ ಹಾಗೂ ನಿವೃತ್ತ ಕೃಷಿ ಅಧಿಕಾರಿ ಸುಬ್ರಹ್ಮಣ್ಯ ಮಾತನಾಡಿ, ಬೇಂದ್ರೆಯವರ ಜನಪ್ರಿಯ ಕವನ ‘ನೀ ಹಾಂಗೆ ನೋಡಬೇಡ ನನ್ನ’ ಕವಿತೆಯ ಹಿಂದಿನ ದುಃಖ-ದುಮ್ಮಾನ ಹಾಗೂ ಕವಿತೆ ರಚನೆಯಾದ ಸಂದರ್ಭವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿವರ್ಯರ ಕೃತಿಗಳನ್ನು ವಿದ್ಯಾರ್ಥಿಗಳು ನೆನಪಿಟ್ಟು ಓದಬೇಕು ಎಂದರು.ದ.ರಾ. ಬೇಂದ್ರೆಯವರ ‘ನಾಕುತಂತಿ’, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಹಾಗೂ ಮಾಸ್ತಿಯವರ ‘ಚಿಕ್ಕವೀರರಾಜೇಂದ್ರ’ ಕೃತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿರುವುದನ್ನು ಅವರು ತಿಳಿಸಿದರು.ಮುಖ್ಯ ಶಿಕ್ಷಕಿ ಸಿಸ್ಟರ್ ಐರಿನ್ ಡಿಸೆಲ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ನಾಗರಕೊಡಿಗೆ ಗಣೇಶ್ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಶ್ವಿನಿ ಸ್ವಾಗತಿಸಿದರು. ನಾಗಪ್ರಿಯ ನಿರೂಪಿಸಿದರು. ಉಪನ್ಯಾಸಕಿ ಬಿ.ಎಸ್. ವಿನುತಾ ಕಾರ್ಯಕ್ರಮ ನಿರ್ವಹಿಸಿದರು. ಯುವಕವಿ ಪ್ರವೀಣ್ ಎಂ. ಕಾರ್ಗಡಿ ವಂದಿಸಿದರು.ಕಾರ್ಯಕ್ರಮದಲ್ಲಿ ರಾಧಿಕಾ, ಶಂಕ್ರಪ್ಪ, ವಸಂತಿ, ಸುಜಾತಾ, ಮಹಾಬಲ, ವಸಿಷ್ಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.ನಂತರ ಕಾಲೇಜು ವಿದ್ಯಾರ್ಥಿನಿಯರಿಂದ ವಿವಿಧ ಗೀತ ಗಾಯನ ಕಾರ್ಯಕ್ರಮ ನಡೆಯಿತು.
ಬರಹ: Chetandas Hosamane









