
ಹೊಸನಗರ: ಪ್ರಸ್ತಾವಿತ ರೈಲ್ವೆ ಯೋಜನೆಯಲ್ಲಿ ಹೊಸನಗರ ತಾಲೂಕನ್ನು ಸೇರ್ಪಡೆಗೊಳಿಸಿ, ರೈಲ್ವೆ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಬುಧವಾರ ಸ್ಥಳೀಯ ಮುಖಂಡರು ಹಾಗೂ ವರ್ತಕರ ಸಂಘದ ನೇತೃತ್ವದಲ್ಲಿ ಸಾರ್ವಜನಿಕರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖ ಮುಖಂಡ ಎನ್.ಆರ್. ದೇವಾನಂದ್, “ಹೊಸನಗರ ತಾಲೂಕು ಈಗಾಗಲೇ ಅಣೆಕಟ್ಟುಗಳ ನಿರ್ಮಾಣಕ್ಕಾಗಿ ತನ್ನ ಭೂಮಿಯನ್ನು ಕಳೆದುಕೊಂಡು ರಾಜ್ಯಕ್ಕೆ ದೊಡ್ಡ ತ್ಯಾಗ ಮಾಡಿದೆ. ಪ್ರಸ್ತುತ ಪ್ರಸ್ತಾಪವಾಗಿರುವ ತಾಳಗುಪ್ಪ-ಶಿರಸಿ-ಹೊನ್ನಾವರ ಮಾರ್ಗವು ಮೀಸಲು ಅರಣ್ಯ ಪ್ರದೇಶದ ಮೂಲಕ ಹಾದುಹೋಗುತ್ತದೆ. ಇದರ ಬದಲಾಗಿ, ಹೊಸನಗರದ ಮುಳುಗಡೆ ಪ್ರದೇಶದ ಮೂಲಕ ಬೈಂದೂರಿಗೆ ಸಂಪರ್ಕ ಕಲ್ಪಿಸಿದರೆ ಅರಣ್ಯ ನಾಶ ಹಾಗೂ ಪುನರ್ವಸತಿ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗಲಿವೆ,” ಎಂದು ಸರ್ಕಾರದ ಗಮನ ಸೆಳೆದರು.

“ಹೊಸನಗರ ಮಾರ್ಗವಾಗಿ ರೈಲು ಕೊಂಡೊಯ್ಯುವುದರಿಂದ ಅಂದಾಜು 20 ರಿಂದ 25 ಕಿ.ಮೀ. ಅಂತರ ಹೆಚ್ಚಾಗಬಹುದು. ಆದರೆ, ಭೂಮಿ ಕಳೆದುಕೊಂಡಿರುವ ಈ ಭಾಗದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಜೀವ ತುಂಬಲು ಈ ರೈಲ್ವೆ ಮಾರ್ಗವು ಸಂಜೀವಿನಿಯಾಗಲಿದೆ,” ಎಂದು ಮುಖಂಡರು ವಿವರಿಸಿದರು. 2018ರಲ್ಲಿ ಅಂದಿನ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡರಿಗೂ ಈ ಕುರಿತು ಮನವಿ ಸಲ್ಲಿಸಲಾಗಿತ್ತು ಹಾಗೂ ಅವರು ಪರಿಶೀಲಿಸುವ ಭರವಸೆ ನೀಡಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಈ ನ್ಯಾಯಯುತ ಬೇಡಿಕೆಗೆ ಬೈಂದೂರು ರೈಲ್ವೆ ಹೋರಾಟ ಸಮಿತಿಯ ಬೆಂಬಲವಿದ್ದು, ಕೊಲ್ಲೂರಿನಲ್ಲಿಯೂ ಈ ಕುರಿತು ಸಭೆ ನಡೆಸಲಾಗಿದೆ. ಸಂಸದರು ಹಾಗೂ ಮಾಜಿ ಶಾಸಕರಾದ ಹಾಲಪ್ಪನವರ ಗಮನಕ್ಕೂ ಈ ವಿಚಾರವನ್ನು ತಂದು ಯೋಜನೆಯನ್ನು ಕಾರ್ಯಗತಗೊಳಿಸಲು ಒತ್ತಡ ಹೇರಲಾಗುತ್ತಿದೆ.

ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲು, ಮುಖಂಡರಾದ ದೇವಾನಂದ್, ಹಾಲಗದ್ದೆ ಉಮೇಶ್, ಜಯರಾಮ್ ಶೆಟ್ರು ವರ್ತಕರ ಸಂಘದ ಸುರೇಶ ಬಿಎಸ್, ಹರೀಶ್ ರಾವ್ ವಿಜೇಂದ್ರ ಶೇಟ್, ಭೋಜಪ್ಪ ಗೌಡ್ರು,ಸಂತೋಷ್ ಶೇಟ್, ವಿನಾಯಕ ಹೆದ್ಲಿ, ವಾದಿರಾಜ್,ಉದಯ್ ಕುಮಾರ್, ಲೋಕೇಶ್ ಆದುವಳ್ಳಿ ವಿಟ್ಟಲ್ ರಾವ್, ನರಸಿಂ ರಾಮ್ ಪಟೇಲ್, ರವಿ ಶೇಟ್,ರಾಘವೇಂದ್ರ ಅರಳಸುರಳಿ,ಗುರುರಾಜ ಎರಗಿ, ಗೋಪಾಲ ಚೌಹಾನ್, ಕೇಶವ್ ರಾಘವೇಂದ್ರ,ರವಿ ಶೆಟ್ಟರು, ವೆಂಕಟೇಶ್, ಗಜಾನನ ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ. “ಕೇವಲ ಬೆರಳೆಣಿಕೆಯ ಮುಖಂಡರ ಹೋರಾಟವಷ್ಟೇ ಸಾಲದು, ಇಡೀ ಹೊಸನಗರ ತಾಲೂಕಿನ ಜನತೆಯ ಧ್ವನಿ ಗಟ್ಟಿಯಾದರೆ ಮಾತ್ರ ನಮಗೆ ನ್ಯಾಯ ಸಿಗಲು ಸಾಧ್ಯ,” ಎಂದು ಕರೆ ನೀಡಿದ ಮುಖಂಡರು, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸುಳಿವು ನೀಡಿದರು.
ಬರಹ: ಚೇತನ್ ದಾಸ್ ಹೊಸಮನೆ









