​ತುರ್ತು ಸೈರನ್ ಮೊಳಗಿದ್ದೇಕೆ? ಇದು ಕೇಂದ್ರ ಸರ್ಕಾರದ ಹೈಟೆಕ್ ಸುರಕ್ಷತಾ ತಾಲೀಮು!

ನವದೆಹಲಿ: ಇಂದು ದೇಶದಾದ್ಯಂತ ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ ಏಕಾಏಕಿ ಜೋರಾದ ಸೈರನ್ ಶಬ್ದದೊಂದಿಗೆ ತುರ್ತು ಎಚ್ಚರಿಕೆಯ ಸಂದೇಶಗಳು ಬಂದಿದ್ದು, ಸಾರ್ವಜನಿಕರಲ್ಲಿ ಕೆಲಕಾಲ ಕುತೂಹಲ ಮತ್ತು ಆತಂಕ ಮೂಡಿಸಿತು. ಆದರೆ, ಈ ಬಗ್ಗೆ ತಕ್ಷಣವೇ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಇದು ಕೇವಲ ‘ವಿಪತ್ತು ಎಚ್ಚರಿಕೆ ವ್ಯವಸ್ಥೆ’ಯ (Cell Broadcast Alert System) ಪ್ರಾಯೋಗಿಕ ಪರೀಕ್ಷೆಯಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಗಾಬರಿಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

​ದೂರಸಂಪರ್ಕ ಇಲಾಖೆ (DoT) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಜಂಟಿಯಾಗಿ ಈ ತಾಂತ್ರಿಕ ಪರೀಕ್ಷೆಯನ್ನು ಕೈಗೊಂಡಿವೆ. ಭೂಕಂಪ, ಸುನಾಮಿ ಅಥವಾ ಪ್ರವಾಹದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರಿಗೆ ಕ್ಷಣಾರ್ಧದಲ್ಲಿ ಮುನ್ಸೂಚನೆ ನೀಡಿ ಪ್ರಾಣಹಾನಿ ತಡೆಯುವುದು ಈ ಅತ್ಯಾಧುನಿಕ ತಂತ್ರಜ್ಞಾನದ ಮುಖ್ಯ ಉದ್ದೇಶವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಮೊಬೈಲ್ ನೆಟ್‌ವರ್ಕ್‌ಗಳ ಮೂಲಕ ಸಂದೇಶಗಳು ಎಷ್ಟು ಪರಿಣಾಮಕಾರಿಯಾಗಿ ತಲುಪುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಸನ್ನದ್ಧತೆ ನಡೆಸಲಾಗುತ್ತಿದೆ.

ಈಗಾಗಲೇ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹಂತ ಹಂತವಾಗಿ ಈ ಪರೀಕ್ಷೆ ನಡೆದಿದ್ದು, ಈಗ ರಾಷ್ಟ್ರಮಟ್ಟದಲ್ಲಿ ಇದರ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತಿದೆ. ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದರೂ ಈ ಸೈರನ್ ಶಬ್ದ ಕೇಳಿಬರುವಂತೆ ವಿನ್ಯಾಸಗೊಳಿಸಲಾಗಿದೆ. ಇಂತಹ ಸಂದೇಶಗಳು ಬಂದಾಗ ಅವುಗಳನ್ನು ಓದಿ ಅರ್ಥಮಾಡಿಕೊಳ್ಳಬೇಕೆಂದು ಸರ್ಕಾರ ಸೂಚಿಸಿದ್ದು, ಇದು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವ ಅಥವಾ ಕ್ರಮ ಕೈಗೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ. ನಿಮ್ಮ ಸುರಕ್ಷತೆಗಾಗಿ ಸರ್ಕಾರ ರೂಪಿಸಿರುವ ಈ ವ್ಯವಸ್ಥೆಗೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ.

ವಿಶೇಷ ಸೂಚನೆ: ಇಂತಹ ತುರ್ತು ಸಂದೇಶಗಳು ಬಂದಾಗ ಗಾಬರಿಯಾಗುವ ಅಗತ್ಯವಿಲ್ಲ. ಇದು ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣೆಗಾಗಿ ಹಮ್ಮಿಕೊಂಡಿರುವ ತಾಂತ್ರಿಕ ಪರೀಕ್ಷೆಯಾಗಿದೆ. ಸಂದೇಶವನ್ನು ಓದಿದ ಬಳಿಕ ‘OK’ ಬಟನ್ ಒತ್ತುವ ಮೂಲಕ ಸಹಕರಿಸಿ.

ಬರಹ: Chetandas Hosamane

Leave a Comment