ರಿಪ್ಪನ್‌ಪೇಟೆಯಲ್ಲಿ ನಿವೃತ್ತ ಸೇನಾ ದಂಪತಿಗೆ ಅಭೂತಪೂರ್ವ ಸ್ವಾಗತ: 36 ವರ್ಷಗಳ ದೇಶಸೇವೆಯ ಸಾರ್ಥಕತೆ

ಭಾರತೀಯ ಸೇನೆಯಲ್ಲಿ ಸುಮಾರು 36 ವರ್ಷಗಳ ಕಾಲ ಸುದೀರ್ಘ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾದ ಹೆಮ್ಮೆಯ ಯೋಧ ಎ. ಕುಮಾರ್ ಹಾಗೂ ಅವರ ಪತ್ನಿ ಪದ್ಮಾ ಕುಮಾರ್ ಅವರು ತಮ್ಮ ಹುಟ್ಟೂರಾದ ರಿಪ್ಪನ್‌ಪೇಟೆಗೆ ಮರಳಿದ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಮತ್ತು ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಲಭಿಸಿತು.

ದೇಶದ ವಿವಿಧ ಗಡಿ ಭಾಗಗಳಲ್ಲಿ ಕಠಿಣ ಪರಿಸ್ಥಿತಿಗಳ ನಡುವೆಯೂ ಭಾರತ ಮಾತೆಯ ರಕ್ಷಣೆಗಾಗಿ ಶ್ರಮಿಸಿದ ಈ ದಂಪತಿಗಳ ನಿವೃತ್ತ ಜೀವನಕ್ಕೆ ಶುಭ ಕೋರಲು ಇಡೀ ರಿಪ್ಪನ್‌ಪೇಟೆ ಸನ್ನದ್ಧವಾಗಿತ್ತು.
ಸಮೀಪದ ಸಿದ್ದಪ್ಪನ ಗುಡಿಯಿಂದ ತೆರೆದ ವಾಹನದಲ್ಲಿ ದಂಪತಿಗಳನ್ನು ಕರೆತರಲಾಯಿತು.

ಈ ಭವ್ಯ ಮೆರವಣಿಗೆಗೆ ಡೊಳ್ಳು-ಕುಣಿತದಂತಹ ಜಾನಪದ ಕಲಾ ತಂಡಗಳು ಮೆರುಗು ನೀಡಿದವು. ದಾರಿಯುದ್ದಕ್ಕೂ ಸಾರ್ವಜನಿಕರು ಯೋಧ ದಂಪತಿಗಳಿಗೆ ಪುಷ್ಪವೃಷ್ಟಿ ಮಾಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಮೆರವಣಿಗೆಯ ನಂತರ ದಂಪತಿಗಳು ಪ್ರಸಿದ್ಧ ಶ್ರೀ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಭಕ್ತಿ ಮತ್ತು ದೇಶಭಕ್ತಿಯ ವಾತಾವರಣ ಮನೆಮಾಡಿತ್ತು.
ನಂತರ ವಿನಾಯಕ ವೃತ್ತದಲ್ಲಿ ಜಮಾಯಿಸಿದ ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಎ. ಕುಮಾರ್ ಮತ್ತು ಪದ್ಮಾ ಕುಮಾರ್ ದಂಪತಿಗಳನ್ನು ಶಾಲು ಹೊದಿಸಿ, ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸ್ವಾಗತ ಸಮಾರಂಭವು ಯಾವುದೇ ರಾಜಕೀಯ ಪಕ್ಷಗಳ ಮಿತಿಯಿಲ್ಲದೆ ಸಂಪೂರ್ಣವಾಗಿ ನಾಗರಿಕರಿಂದಲೇ ಆಯೋಜಿತವಾಗಿದ್ದು, ರಿಪ್ಪನ್‌ಪೇಟೆಯ ಜನರ ಒಗ್ಗಟ್ಟು ಮತ್ತು ಯೋಧರ ಮೇಲಿರುವ ಅಪಾರ ಗೌರವಕ್ಕೆ ಸಾಕ್ಷಿಯಾಯಿತು. ಈ ದಂಪತಿಯ ದೇಶಸೇವೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಆಶಯದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಬರಹ: Chetandas Hosamane

Leave a Comment