ಹೊಸನಗರ ಸರ್ಕಾರಿ ಆಸ್ಪತ್ರೆ: 5-6 ವರ್ಷಗಳಿಂದ ಧೂಳು ತಿನ್ನುತ್ತಿರುವ ಲಕ್ಷಾಂತರ ಮೌಲ್ಯದ ಸೋಲಾರ್ ಪ್ಯಾನೆಲ್‌ಗಳು!

Photo of author

By vishwachetana807@gmail.com

ಹಿಂದಿನ ಶಾಸಕರು, ರಕ್ಷಾ ಸಮಿತಿಯ ಅವಧಿಯ ಕಾಮಗಾರಿ ಇಂದಿಗೂ ನಿರುಪಯುಕ್ತ | ಈಗಿನವರಾದರೂ ಗಮನ ಹರಿಸುವರೇ?

ಹೊಸನಗರ: ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಎಗ್ಗಿಲ್ಲದೆ ಪೋಲು ಮಾಡಿರುವ ಜ್ವಲಂತ ಉದಾಹರಣೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಗೆ ನಿರಂತರ ವಿದ್ಯುತ್ ಒದಗಿಸುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು (Solar Panels) ಅಳವಡಿಸಿ ಐದಾರು ವರ್ಷಗಳೇ ಕಳೆದಿವೆ. ಆದರೆ, ಇಂದಿಗೂ ಆಸ್ಪತ್ರೆಗೆ ಈ ಯೋಜನೆಯ ಒಂದು ಸಣ್ಣ ಪ್ರಯೋಜನವೂ ಸಿಕ್ಕಿಲ್ಲ. ಅಳವಡಿಕೆಯಾದ ದಿನದಿಂದಲೂ ನಿರ್ವಹಣೆಯಿಲ್ಲದೆ ಇಡೀ ವ್ಯವಸ್ಥೆ ಮೂಲೆಗುಂಪಾಗಿದೆ.

ಹಿಂದಿನ ಶಾಸಕರು ಹಾಗೂ ರಕ್ಷಾ ಸಮಿತಿಯ ನಿರ್ಲಕ್ಷ್ಯ
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ಸೋಲಾರ್ ಪ್ಯಾನೆಲ್‌ಗಳನ್ನು ಹಿಂದಿನ ಶಾಸಕರ ಅವಧಿಯಲ್ಲಿ ಹಾಗೂ ಅಂದಿನ ‘ಆರೋಗ್ಯ ರಕ್ಷಾ ಸಮಿತಿ’ಯ ಮೇಲ್ವಿಚಾರಣೆಯಲ್ಲಿ ಅಳವಡಿಸಲಾಗಿತ್ತು. ಆದರೆ ಅಳವಡಿಕೆಯಾದಾಗಿನಿಂದಲೂ ಇವುಗಳ ಸದುಪಯೋಗವಾಗಿಲ್ಲ. ಆಸ್ಪತ್ರೆಯ ಕುಂದುಕೊರತೆಗಳನ್ನು ನಿವಾರಿಸಬೇಕಾದ ಹಿಂದಿನ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು, ಲಕ್ಷಾಂತರ ರೂಪಾಯಿ ಸಾರ್ವಜನಿಕ ಆಸ್ತಿ ಕಣ್ಣೆದುರೇ ಹಾಳಾಗುತ್ತಿದ್ದರೂ ಜಾಣಕುರುಡು ಪ್ರದರ್ಶಿಸಿದ್ದರು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

​ಬಳಕೆಯಾಗದೆ ಧೂಳು ಹಿಡಿದ ಸೌರ ಫಲಕಗಳು!
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾಂಕ್ರೀಟ್ ಬ್ಲಾಕ್‌ಗಳನ್ನು ಬಳಸಿ ಪ್ಯಾನೆಲ್ ಅಳವಡಿಸುವ ಮೂಲ ರಚನೆ ಮಾಡಲಾಗಿದೆ. ಆದರೆ, ನಿರ್ವಹಣೆಯ ಕೊರತೆ ಮತ್ತು ಸಂಬಂಧಪಟ್ಟವರ ನಿರ್ಲಕ್ಷ್ಯದಿಂದಾಗಿ ದಪ್ಪನೆಯ ಧೂಳು ಮತ್ತು ಕೊಳೆಯಿಂದ ಕೂಡಿರುವ ಇವು ಕೇವಲ ಪ್ರದರ್ಶನದ ವಸ್ತುವಾಗಿ ತುಕ್ಕು ಹಿಡಿಯುತ್ತಿವೆ. ಅಳವಡಿಕೆಯಾದ ದಿನದಿಂದ ಇಲ್ಲಿಯವರೆಗೆ ಇವುಗಳಿಂದ ಆಸ್ಪತ್ರೆಗೆ ವಿದ್ಯುತ್ ಬಳಕೆಯಾಗಿಲ್ಲ.

ಈಗಿನ ಆರೋಗ್ಯ ರಕ್ಷಾ ಸಮಿತಿಗೆ ಸವಾಲು
ಹಿಂದಿನ ಆಡಳಿತದ ಅವಧಿಯಲ್ಲಿ ಆದ ಈ ಪ್ರಮಾದವನ್ನು ಸರಿಪಡಿಸುವ ಜವಾಬ್ದಾರಿ ಈಗಿನ ಆಡಳಿತದ ಮೇಲಿದೆ. ನೂತನ ಶಾಸಕರು, ಈಗಿರುವ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಾದರೂ ಈ ಬಗ್ಗೆ ತುರ್ತು ಗಮನ ಹರಿಸುತ್ತಾರೆಯೇ? ಅಥವಾ ಹಿಂದಿನವರಂತೆ ಇವರೂ ಮೌನಕ್ಕೆ ಶರಣಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬಡ ರೋಗಿಗಳಿಗೆ ಅನುಕೂಲವಾಗಬೇಕಿದ್ದ ಆಸ್ಪತ್ರೆಯಲ್ಲಿ ಇಂತಹ ಕಳಪೆ ನಿರ್ವಹಣೆ ಮತ್ತು ನಿರ್ಲಕ್ಷ್ಯ ತೋರಿರುವುದು ದುರದೃಷ್ಟಕರ. ಸಾರ್ವಜನಿಕರ ಹಣವನ್ನು ಪೋಲು ಮಾಡಿದ ಗುತ್ತಿಗೆದಾರರು ಮತ್ತು ಇದಕ್ಕೆ ಕಣ್ಮುಚ್ಚಿ ಕುಳಿತವರ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಬೇಕು. ತಕ್ಷಣವೇ ಈ ಪ್ಯಾನೆಲ್‌ಗಳನ್ನು ಸರಿಪಡಿಸಿ ಆಸ್ಪತ್ರೆಯ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ತೀವ್ರವಾಗಿ ಆಗ್ರಹಿಸಿದ್ದಾರೆ.

ಬರಹ: Chetandas Hosamane

Leave a Comment