ಬಿಸಿಯೂಟ ನಿರ್ವಹಣೆ: ಆರ್ಥಿಕ ನಷ್ಟದಲ್ಲಿ ಶಿಕ್ಷಕರು, ಪರಿಹಾರಕ್ಕೆ ಆಗ್ರಹಿಸಿ ಕೆ.ಜಿ. ಪುಟ್ಟಸ್ವಾಮಿ ನೇತೃತ್ವದಲ್ಲಿ ಇ.ಓ.ಗೆ ಮನವಿ

ಹೊಸನಗರ (ಜೂನ್ 12) ಶಾಲಾ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟ (ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ್) ಯೋಜನೆಯನ್ನು ನಿರ್ವಹಿಸುವಲ್ಲಿ ತಾಲೂಕಿನ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹೈರಾಣಾಗಿದ್ದು, ಎದುರಾಗಿರುವ ಆರ್ಥಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಹೊಸನಗರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ. ಹೊಸನಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (ರಿ) ವತಿಯಿಂದ ಈ ಜಂಟಿ ಮನವಿ ಸಲ್ಲಿಸಲಾಗಿದ್ದು, ಬಿಸಿಯೂಟದ ಯಶಸ್ವಿ ಅನುಷ್ಠಾನದ ನಡುವೆಯೂ ಶಿಕ್ಷಕರು ಅನುಭವಿಸುತ್ತಿರುವ ಪ್ರಮುಖ ಐದು ಸಮಸ್ಯೆಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶಾಲಾ ಬಿಸಿಯೂಟದ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಬದಲಿ ಫೋನ್ ನಂಬರ್ ನೀಡಬೇಕಿದೆ. ಆದರೆ, ಶಿಕ್ಷಕರು ತಮ್ಮ ಮನೆಯ ಸಿಲಿಂಡರ್ ಬುಕಿಂಗ್‌ಗೆ ಈಗಾಗಲೇ ತಮ್ಮ ಸಂಖ್ಯೆ ನೀಡಿರುವುದರಿಂದ ಬುಕಿಂಗ್ ಸಾಧ್ಯವಾಗುತ್ತಿಲ್ಲ. ಸಿಲಿಂಡರ್‌ಗಾಗಿ ಗ್ಯಾಸ್ ಕಚೇರಿಗೆ ಅಲೆಯುವುದನ್ನು ತಪ್ಪಿಸಲು, ಇಲಾಖೆಯಿಂದಲೇ ಪ್ರತಿಯೊಂದು ಶಾಲೆಗೂ ಒಂದು ಹೊಸ ಸ್ಮಾರ್ಟ್ ಫೋನ್ ಹಾಗೂ ಸಿಮ್ ಕಾರ್ಡ್ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಪ್ರತಿದಿನ ಬಿಸಿಯೂಟದ ಲೆಕ್ಕ ಬರೆಯಲು ಅರ್ಧ ಗಂಟೆ ಸಮಯ ವ್ಯರ್ಥವಾಗುತ್ತಿದ್ದು, ಪದೇ ಪದೇ ಮಾಹಿತಿ ಕೇಳುವುದರಿಂದ ಪಾಠದ ಸಮಯ ಹಾಳಾಗುತ್ತಿದೆ. ಕೇವಲ ಮಕ್ಕಳ ಸಂಖ್ಯೆ ನಮೂದಿಸಿದರೆ ಲೆಕ್ಕಾಚಾರ ಮತ್ತು ತಿಂಗಳ ಕ್ರೋಢೀಕರಣ ತಾನಾಗಿಯೇ ಬರುವಂತಹ ಸುಲಭದ ಎಕ್ಸೆಲ್ (Excel) ಶೀಟ್ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಮಾರುಕಟ್ಟೆಯಲ್ಲಿ ತರಕಾರಿ, ಬೇಳೆ, ಸಾಂಬಾರು ಪುಡಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ವಿಪರೀತ ಹೆಚ್ಚಾಗಿದೆ. ಇದರಿಂದ ಮುಖ್ಯ ಶಿಕ್ಷಕರು ತಮ್ಮ ಜೇಬಿನಿಂದ ಹೆಚ್ಚು ಹಣ ಕೊಟ್ಟು ಖರೀದಿಸುವಂತಾಗಿದ್ದು, ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಇಲಾಖೆಯ ವ್ಯವಸ್ಥೆಯಿಂದಲೇ ಕಡ್ಡಾಯವಾಗಿ ವಸ್ತುಗಳನ್ನು ಪೂರೈಸಬೇಕು ಅಥವಾ ಪ್ರಸ್ತುತ ಮಾರುಕಟ್ಟೆ ದರವನ್ನೇ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಮೊಟ್ಟೆ ಮತ್ತು ಬಾಳೆಹಣ್ಣು ಖರೀದಿಗೆ ಶಿಕ್ಷಕರು ಅಂಗಡಿಗಳನ್ನು ಹುಡುಕಿಕೊಂಡು ಹೋಗಬೇಕಿದ್ದು, ಇದರಿಂದ KAMS (ಹಾಜರಾತಿ) ದಾಖಲಿಸಲು ತೊಂದರೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಮೊಟ್ಟೆ ದರ ಗಣನೀಯವಾಗಿ ಏರಿಕೆ ಕಂಡಿರುವುದರಿಂದ, ಶಾಲೆಗಳಿಗೆ ನೇರವಾಗಿ ಮೊಟ್ಟೆ ಪೂರೈಕೆ ಮಾಡುವ ವ್ಯವಸ್ಥಿತ ಕಾರ್ಯಯೋಜನೆ ರೂಪಿಸಬೇಕು ಎಂದು ತಿಳಿಸಿದ್ದಾರೆ.

ಶಾಲೆಗಳಿಗೆ ಅಕ್ಕಿ, ಬೇಳೆ, ಎಣ್ಣೆ ಸಕಾಲಕ್ಕೆ ಪೂರೈಕೆಯಾಗುತ್ತಿಲ್ಲ. ಜತೆಗೆ, ಬೇಳೆ ಹಾಗೂ ಎಣ್ಣೆ ಖರೀದಿಸಲು ಪ್ರತಿ ವಾರ ಅನುಮತಿ ಪಡೆಯಬೇಕೆಂಬ ಕಠಿಣ ನಿಯಮವಿದೆ. ಭೌಗೋಳಿಕವಾಗಿ ವಿಸ್ತಾರವಾಗಿರುವ ಹೊಸನಗರ ತಾಲೂಕಿನಲ್ಲಿ ದೂರದ ಶಾಲೆಗಳಿಂದ ಬಂದು ಅನುಮತಿ ಪಡೆಯುವುದು ಶಿಕ್ಷಕರಿಗೆ ಸಮಯ ವ್ಯರ್ಥ ಹಾಗೂ ಆರ್ಥಿಕ ನಷ್ಟದ ಬಾಬ್ತಾಗಿದೆ. ಹೀಗಾಗಿ ಸಕಾಲದಲ್ಲಿ ಪಡಿತರ ಪೂರೈಸಿ, ನಿಯಮಗಳನ್ನು ಸಡಿಲಿಸಬೇಕು. ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ನಿಯೋಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಜಿ. ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಹೆಚ್.ಸಿ, ಕ.ರಾ.ಸ.ನೌ ಸಂಘದ ನಿರ್ದೇಶಕ ಬಸವಣ್ಯಪ್ಪ, ನಿರ್ದೇಶಕ ಬೆಳ್ಳೂರು ಶಿವಮೂರ್ತಿ ಎಂ.ಎಸ್, ಖಜಾಂಚಿ ಈಶ್ವರಪ್ಪ ಎಂ.ಎಂ, ಉಪಾಧ್ಯಕ್ಷರುಗಳಾದ ಧರ್ಮಪ್ಪ ಡಿ, ನೀಲಾವತಿ ಮತ್ತು ಮಂಜುಳಾ, ಕಾರ್ಯದರ್ಶಿ ವೆಂಕಟೇಶ್, ಸಹ ಕಾರ್ಯದರ್ಶಿ ಗಾಯತ್ರಿ ಪಟಗಾರ್, ಜಿ.ಪಿ.ಟಿ ಅಧ್ಯಕ್ಷ ಧನಂಜಯ, ನಿರ್ದೇಶಕ ಮಾಲತೇಶ್, ಹೆಚ್.ಎಂ. ಮೇಘರಾಜ್ ಹಾಗೂ ಬ.ಮು.ಶಿ ಲಿಲ್ಲಿ ಡಿಸೋಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬರಹ: Chetandas Hosamane









