
ಹೊಸನಗರ ತಾಲೂಕಿನ ಕಸಬಾ ಹೋಬಳಿ, ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಗೋಡಿ ಗ್ರಾಮದಲ್ಲಿ ಯಾವುದೇ ಸೂಕ್ತ ಮುನ್ಸೂಚನೆ ಅಥವಾ ಪೂರ್ವ ನೋಟಿಸ್ ನೀಡದೆ ಬಡ ಕುಟುಂಬವೊಂದರ ಮನೆಯನ್ನು ಏಕಾಏಕಿ ತೆರವುಗೊಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಅರಗೋಡಿ ಗ್ರಾಮದ ಸರ್ವೆ ನಂಬರ್ 7 ರಲ್ಲಿ ಕೂಲಿ ಕಾರ್ಮಿಕ ನಾಗರಾಜ್ ಎಂಬುವರು ಕಳೆದ 40 ವರ್ಷಗಳಿಂದ ವಾಸವಿದ್ದರು. ಕಂದಾಯ ಡಿಮ್ಯಾಂಡ್ ಪಾವತಿ ಸೇರಿದಂತೆ ಅದೇ ವಿಳಾಸದ ಅಧಿಕೃತ ದಾಖಲೆಗಳನ್ನು ಹೊಂದಿದ್ದರೂ, ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ ಮನೆಯನ್ನು ಸಂಪೂರ್ಣವಾಗಿ ನೆಲಸಮ ಮಾಡಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬ ಇದೀಗ ಅಧಿಕಾರಿಗಳ ಈ ಕ್ರಮದಿಂದಾಗಿ ವಾಸಿಸಲು ಸೂರಿಲ್ಲದೆ ಬೀದಿಪಾಲಾಗಿದೆ. ಕಾನೂನು ಪ್ರಕಾರ ಕನಿಷ್ಠ ನೋಟಿಸ್ ಕೂಡ ನೀಡದೆ ಮಾನವೀಯತೆ ಮರೆತು ವರ್ತಿಸಿರುವ ಅಧಿಕಾರಿಗಳ ಕ್ರಮ ಖಂಡನೀಯ. ಆದ್ದರಿಂದ, ಅನ್ಯಾಯವಾಗಿ ಕೆಡವಲಾಗಿರುವ ಮನೆಯನ್ನು ಅರಣ್ಯ ಇಲಾಖೆಯೇ ಮರಳಿ ನಿರ್ಮಿಸಿಕೊಟ್ಟು ಬಡ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬರಹ: Chetandas Hosamane









