ಬಗರ್ ಹುಕುಂ ಅಕ್ರಮ ಒತ್ತುವರಿ ತೆರವು: ತಹಶೀಲ್ದಾರರಿಗೆ ಭೂರಹಿತ ಗ್ರಾಮಸ್ಥರ ಮನವಿ

Photo of author

By vishwachetana807@gmail.com

ಹೊಸನಗರ: ತಾಲ್ಲೂಕಿನ ಹುಂಚಾ ಹೋಬಳಿಯ ಹೊನ್ನೆಬೈಲು ಗ್ರಾಮದಲ್ಲಿ ನಡೆದಿರುವ ಸರ್ಕಾರಿ ಜಾಗದ ಅಕ್ರಮ ಒತ್ತುವರಿಯನ್ನು ತಕ್ಷಣವೇ ಸರ್ವೆ ನಡೆಸಿ ತೆರವುಗೊಳಿಸಬೇಕು ಹಾಗೂ ವಶಪಡಿಸಿಕೊಂಡ ಆ ಜಾಗವನ್ನು ಭೂರಹಿತ ಬಡ ಕೂಲಿ ಕಾರ್ಮಿಕರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ಆಶ್ರಯ ರಹಿತರು ಹಾಗೂ ಗ್ರಾಮಸ್ಥರು ಹೊಸನಗರ ತಹಶೀಲ್ದಾರ್ ಭರತರಾಜ್ ಕೆ.ಎನ್. ರವರಿಗೆ ಮನವಿ ಸಲ್ಲಿಸಿದ್ದಾರೆ.

​ಹುಂಚಾ ಹೋಬಳಿಯ ಹೊನ್ನೆಬೈಲು ಗ್ರಾಮದ ವ್ಯಾಪ್ತಿಯ ಸರ್ವೆ ನಂಬರ್ 99, 92, 11 ಹಾಗೂ ಇತರೆ ಸರ್ವೆ ನಂಬರ್‌ಗಳಲ್ಲಿ ಹಲವಾರು ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ನೂರಾರು ಎಕರೆ ಸರ್ಕಾರಿ ಜಮೀನನ್ನು (ಬಗರ್ ಹುಕುಂ) ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಕೃಷಿಯನ್ನೇ ನೆಚ್ಚಿಕೊಂಡಿರುವ ದಿನಗೂಲಿ ಕಾರ್ಮಿಕರು, ಸ್ವಂತ ಜಮೀನು ಇಲ್ಲದೆ ಅತ್ಯಂತ ಕಷ್ಟದ ಜೀವನ ನಡೆಸುತ್ತಿದ್ದಾರೆ. ಬಡವರಿಗೆ ಯಾವುದೇ ಆಸರೆ ಇಲ್ಲದಿರುವಾಗ, ಪ್ರಭಾವಿಗಳು ಸರ್ಕಾರಿ ಭೂಮಿಯನ್ನು ಈ ರೀತಿ ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವುದು ಭೂರಹಿತರಿಗೆ ತೀವ್ರ ಅನ್ಯಾಯವೆಸಗಿದಂತಾಗಿದೆ. ಇದರಿಂದಾಗಿ ನಿಜವಾದ ಭೂರಹಿತ ಮತ್ತು ಆಶ್ರಯ ರಹಿತ ಬಡ ಕೂಲಿ ಕಾರ್ಮಿಕರಿಗೆ ತೀವ್ರ ವಂಚನೆಯಾಗುತ್ತಿದ್ದು, ತಾಲ್ಲೂಕು ಆಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಾಮಾಜಿಕ ನ್ಯಾಯದ ರಕ್ಷಣೆಗಾಗಿ ಮತ್ತು ಬಡವರ ಜೀವನದ ಹಿತದೃಷ್ಟಿಯಿಂದ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೋಬಳಿಯ ಭೂರಹಿತ ಕಾರ್ಮಿಕರು ಹಾಗೂ ಗ್ರಾಮಸ್ಥರು ಈ ಮನವಿಯ ಮೂಲಕ ಕಳಕಳಿಯಿಂದ ವಿನಂತಿಸಿದ್ದಾರೆ.

​”ನಾವು ಯಾವುದೇ ಆಧಾರವಿಲ್ಲದ, ಸ್ವಂತ ಭೂಮಿ ಇಲ್ಲದ ಬಡ ಕೂಲಿ ಕಾರ್ಮಿಕರಾಗಿದ್ದೇವೆ. ಅಕ್ರಮವಾಗಿ ಒತ್ತುವರಿಯಾಗಿರುವ ಜಾಗವನ್ನು ತಹಶೀಲ್ದಾರರು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ, ತಕ್ಷಣವೇ ತೆರವುಗೊಳಿಸಬೇಕು. ಆ ಮೂಲಕ ಮುಟ್ಟುಗೋಲು ಹಾಕಿಕೊಂಡ ಜಾಗವನ್ನು ಕಾನೂನಿನ ಚೌಕಟ್ಟಿನಲ್ಲಿ ನಮ್ಮಂತಹ ಬಡವರ ಜೀವನೋಪಾಯಕ್ಕಾಗಿ ಮಂಜೂರು ಮಾಡಿ ನಮಗೆ ಆಸರೆಯಾಗಬೇಕು” ಎಂದು ಭೂರಹಿತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಹೊಸನಗರ ತಹಶೀಲ್ದಾರ್ ಭರತರಾಜ್ ಕೆ.ಎನ್. ಅವರು, “ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿದ್ದೇನೆ. ಅಕ್ರಮವಾಗಿ ಒತ್ತುವರಿಯಾದ ಭೂಮಿಯ ಕುರಿತು ಸರ್ವೇ ಕಾರ್ಯ ಕೈಗೊಳ್ಳಲು ಹೆಚ್ಚಿನ ಕ್ರಮಕ್ಕೆ ಆದೇಶಿಸುತ್ತೇನೆ” ಎಂದು ತಿಳಿಸಿದ್ದಾರೆ.

ಬರಹ: Chetandas Hosamane

Leave a Comment