ಹೊಸನಗರದಲ್ಲಿ ಆರೋಗ್ಯ ವ್ಯವಸ್ಥೆ ಕುಸಿತ: ಸಾಮಾಜಿಕ ಹೋರಾಟಗಾರ ನಿತಿನ್ ನಗರ ರವರಿಂದ ನಾಳೆ ಉಪವಾಸ ಸತ್ಯಾಗ್ರಹ

Photo of author

By vishwachetana807@gmail.com

 

​ಹೊಸನಗರ ತಾಲೂಕಿನಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಇಲ್ಲದಿರುವುದು ಮತ್ತು ಆರೋಗ್ಯ ಕೇಂದ್ರಗಳ ದುಸ್ಥಿತಿಯನ್ನು ವಿರೋಧಿಸಿ, ಸರ್ಕಾರವನ್ನು ಎಚ್ಚರಿಸಲು ಸಾಮಾಜಿಕ ಹೋರಾಟಗಾರ ನಿತಿನ್ ನಗರ ಅವರು ನಾಳೆ ಜುಲೈ 18, 2026 ರಂದು ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಎದುರು ಬೆಳಿಗ್ಗೆ 9:00 ಗಂಟೆಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ

 

ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಇಲ್ಲದ ಕಾರಣ ಪ್ರತಿ ವರ್ಷ ನೂರಾರು ಗರ್ಭಿಣಿಯರು ಸಾಗರ, ತೀರ್ಥಹಳ್ಳಿ ಮತ್ತು ಶಿವಮೊಗ್ಗದಂತಹ ದೂರದ ಪ್ರದೇಶಗಳಿಗೆ ಚಿಕಿತ್ಸೆಗಾಗಿ ತೆರಳುವ ಅನಿವಾರ್ಯತೆ ಇದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಗರ್ಭಿಣಿಯರು ಪ್ರಾಣ ಕಳೆದುಕೊಳ್ಳುತ್ತಿದ್ದು, ಇತ್ತೀಚೆಗೆ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟ ಸುಮಾ ಅವರ ಸಾವಿಗೆ ನ್ಯಾಯ ಒದಗಿಸಬೇಕೆಂದು ಈ ಹೋರಾಟದ ಮೂಲಕ ಆಗ್ರಹಿಸಲಾಗಿದೆ.

ಇದರ ಜೊತೆಗೆ, ತಾಲೂಕಿನ ಸುಮಾರು 80% ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಹೊಸನಗರದ ಅನೇಕ ಗ್ರಾಮಗಳು ನೆಟ್‌ವರ್ಕ್ ಮತ್ತು ಸಾರಿಗೆ ಸಂಪರ್ಕವಿಲ್ಲದ ದುರ್ಗಮ ಪ್ರದೇಶಗಳಾಗಿದ್ದು, ಹಾವು ಕಡಿತ, ಹೃದಯಾಘಾತ ಮತ್ತು ರಸ್ತೆ ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲದ ಕಾರಣ ಹಲವಾರು ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಸರಿಪಡಿಸಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಈ ಪ್ರತಿಭಟನೆಯ ಮೂಲಕ ಒತ್ತಾಯಿಸಲಾಗುತ್ತಿದೆ.

ಬರಹ: Chetandas Hosamane

Leave a Comment