ರಿಪ್ಪನ್‌ಪೇಟೆ: ಕಾರು ಡಿಕ್ಕಿಯಾಗಿ ವೃದ್ಧ ಪಾದಚಾರಿ ಸಾವು; ಮೂಗೂಡ್ತಿ ನಿವಾಸಿ ಇಬ್ರಾಹಿಂ ದುರ್ಮರಣ

Photo of author

By vishwachetana807@gmail.com

ರಿಪ್ಪನ್ ಪೇಟೆ: ಪಟ್ಟಣದ ಸಮೀಪದ ಮೂಗೂಡ್ತಿ ಅರಣ್ಯ ಇಲಾಖೆಯ ಕಚೇರಿ ಎದುರು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧ ಪಾದಾಚಾರಿಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಮೃತರನ್ನು ಮೂಗೂಡ್ತಿ ನಿವಾಸಿಯಾದ ಇಬ್ರಾಹಿಂ (69) ಎಂದು ಗುರುತಿಸಲಾಗಿದೆ. ಅವರು ತಮ್ಮ ಕೆಲಸ ನಿಮಿತ್ತ ರಿಪ್ಪನ್ ಪೇಟೆಗೆ ತೆರಳಿ, ಬಳಿಕ ಬಸ್ ಮೂಲಕ ವಾಪಸ್ಸು ತಮ್ಮ ಊರಿಗೆ ಬರುತ್ತಿದ್ದರು ಎನ್ನಲಾಗಿದೆ.
ಬಸ್‌ನಿಂದ ಇಳಿದ ನಂತರ ರಸ್ತೆ ದಾಟಲು ಮುಂದಾದ ವೇಳೆ, ಅತಿ ವೇಗದಲ್ಲಿ ಬಂದ ಡಸ್ಟರ್ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆ ಅತ್ಯಂತ ಜೋರಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಸ್ಥಳೀಯರು ತಕ್ಷಣ ಸ್ಪಂದಿಸಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಅವರು ಈಗಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಿಸಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್ ಪೇಟೆಯ ಶವಗಾರಕ್ಕೆ ಸಾಗಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ತಿಳಿಯಲು ತನಿಖೆಯನ್ನು ಮುಂದುವರಿಸಿದ್ದಾರೆ.

ಬರಹ: Chetandas Hosamane

Leave a Comment