ಮತದಾನಕ್ಕೆ ಮಾತ್ರ ಸೀಮಿತವೇ ಈ ಮಜರೆ ಹಳ್ಳಿಗಳು? ಹುಡೋಡಿ ಮತ್ತು ಕಬ್ಬಿನ ಹಿತ್ತಲು ಗ್ರಾಮದ ದಶಕಗಳ ಅಂಧಕಾರ ಕೇಳೋರು ಯಾರು?

ಹೊಸನಗರ: ಹೊಸನಗರ ತಾಲೂಕಿನ ಕರಿಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಮನೆ ಗ್ರಾಮದ ಹುಡೋಡಿ ಮತ್ತು ಕಬ್ಬಿನ ಹಿತ್ತಲು ಎಂಬ ಎರಡು ಮಜರೆ ಹಳ್ಳಿಗಳ ಸ್ಥಿತಿ ಇಂದಿಗೂ ಶಿಲಾಯುಗವನ್ನೇ ನೆನಪಿಸುವಂತಿದೆ. 21ನೇ ಶತಮಾನದ ಈ ಕಾಲಘಟ್ಟದಲ್ಲೂ ಈ ಗ್ರಾಮಗಳ ಜನರಿಗೆ ವಾಸಿಸಲು ಸರಿಯಾದ ಮನೆಯೂ ಇಲ್ಲ, ನಡೆದಾಡಲು ರಸ್ತೆಯೂ ಇಲ್ಲ, ಕತ್ತಲನ್ನು ಓಡಿಸಲು ವಿದ್ಯುತ್ ಸಂಪರ್ಕವೂ ಇಲ್ಲದಿರುವುದು ವ್ಯವಸ್ಥೆಯ ಅತಿ ದೊಡ್ಡ ವಿಪರ್ಯಾಸ.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಭಾಗದ ಜನರ ಸಂಕಷ್ಟ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರ ಗಮನಕ್ಕೆ ಬರಲಿಲ್ಲವೇ ಎನ್ನುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಶಕಗಳಿಂದ ಇಲ್ಲಿನ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿವೆ. “ಮಾಜಿ ಗೃಹ ಸಚಿವರಾಗಿ ಇಡೀ ರಾಜ್ಯದ ವ್ಯವಸ್ಥೆ ನೋಡಿಕೊಂಡ ಶಾಸಕರಿಗೆ, ತಮ್ಮದೇ ಕ್ಷೇತ್ರದ ಮಜರೆ ಹಳ್ಳಿಗಳ ಅಂಧಕಾರ ಕಾಣುತ್ತಿಲ್ಲವೇ?” ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಚುನಾವಣೆ ಬಂದಾಗ ಮತ ಚಲಾಯಿಸಲು ಮಾತ್ರ ಈ ಭಾಗದ ಜನರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಹತಾಶೆ ಹುಡೋಡಿ ಮತ್ತು ಕಬ್ಬಿನ ಹಿತ್ತಲು ನಿವಾಸಿಗಳಲ್ಲಿದೆ. ವಿದ್ಯುತ್ ಇಲ್ಲದ ಕಾರಣ ಮಕ್ಕಳ ವಿದ್ಯಾಭ್ಯಾಸ ಕತ್ತಲಲ್ಲಿ ಕರಗಿ ಹೋಗುತ್ತಿದೆ. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ರಸ್ತೆಯಿಲ್ಲದ ಕಾರಣ ಪ್ರಾಣ ಸಂಕಟ ಅನುಭವಿಸುವಂತಾಗಿದೆ. ನಾಡಿಗಾಗಿ ಬದುಕು ಕಳೆದುಕೊಂಡವರ ಬದುಕು ಬೆಳಕಾಗುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.


ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರ ಆಗ್ರಹ:
“ಹುಡೋಡಿ ಮತ್ತು ಕಬ್ಬಿನ ಹಿತ್ತಲು ಗ್ರಾಮದ ನಿವಾಸಿಗಳು ದಶಕಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿರುವುದು ಅತ್ಯಂತ ಶೋಚನೀಯ. ಚುನಾವಣೆ ಸಮಯದಲ್ಲಿ ಮಾತ್ರ ಈ ಗ್ರಾಮಗಳ ನೆನಪು ಮಾಡಿಕೊಳ್ಳುವ ನಾಯಕರಿಗೆ ಇಲ್ಲಿನ ಜನರ ನೋವು ಯಾಕೆ ಕಾಣುತ್ತಿಲ್ಲ? ಈ ಕೂಡಲೇ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸದಿದ್ದರೆ, ಗ್ರಾಮಸ್ಥರ ಹಿತದೃಷ್ಟಿಯಿಂದ ಮತದಾನ ಬಹಿಷ್ಕಾರದಂತಹ ತೀವ್ರ ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗುತ್ತದೆ.”
– ಸುಮಾ ಸುಬ್ರಹ್ಮಣ್ಯ, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರು, ಹೊಸನಗರ.
ನಾಡಿಗಾಗಿ ಬದುಕು ಕಳೆದುಕೊಂಡವರ ಬದುಕು ಇನ್ನಾದರೂ ಬೆಳಗಲಿ. ಶಾಸಕ ಆರಗ ಜ್ಞಾನೇಂದ್ರ ಅವರು ಈ ಕೂಡಲೇ ಹುಡೋಡಿ ಮತ್ತು ಕಬ್ಬಿನ ಹಿತ್ತಲು ಭೇಟಿ ನೀಡಿ, ಜನರ ಸಂಕಷ್ಟಕ್ಕೆ ಸ್ಪಂದಿಸಲಿ ಎಂಬುದು ನಾಗರಿಕರ ಒತ್ತಾಯವಾಗಿದೆ.
ಅಭಿವೃದ್ಧಿಯ ಮಾತುಗಳು ಹಸಿರು ಗಾಜಿನ ಅರಮನೆಯಲ್ಲಿ ಕುಳಿತು ಆಡುವ ಮಾತಾಗಬಾರದು; ಅದು ಹುಡೋಡಿ ಮತ್ತು ಕಬ್ಬಿನ ಹಿತ್ತಲಿನಂತಹ ಕತ್ತಲಲ್ಲಿರುವ ಹಳ್ಳಿಗಳಿಗೂ ತಲುಪಬೇಕು. ದಶಕಗಳಿಂದ ಸೂರು, ರಸ್ತೆ ಮತ್ತು ವಿದ್ಯುತ್ ಕಾಣದ ಈ ಜನರ ಆಕ್ರೋಶ ನ್ಯಾಯಯುತವಾಗಿದೆ. ಶಾಸಕ ಆರಗ ಜ್ಞಾನೇಂದ್ರ ಅವರು ಕೇವಲ ಮತದಾನಕ್ಕೆ ಈ ಗ್ರಾಮಗಳನ್ನು ಬಳಸಿಕೊಳ್ಳದೆ, ತಕ್ಷಣವೇ ಜನರ ಸಂಕಷ್ಟಕ್ಕೆ ಸ್ಪಂದಿಸಿ ಅವರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಲಿ ಎನ್ನುವುದೇ ನಮ್ಮ ಆಶಯ.
– ಸಂಪಾದಕರು, Vishwachetana.com
ಬರಹ: Chetandas Hosamane









