ನೇರ ನೇಮಕಾತಿ ತಾರತಮ್ಯ ಖಂಡಿಸಿ ಶಿವಮೊಗ್ಗ ಡಿಸಿಗೆ ಹಸಲರು ಸಮುದಾಯದ ಮನವಿ

Photo of author

By vishwachetana807@gmail.com

ಶಿವಮೊಗ್ಗ: ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾದಂತೆ ಆದಿವಾಸಿ ಅರಣ್ಯ ಮೂಲ ಸಮುದಾಯಗಳಿಗೆ ಎಲ್ಲಾ ವೃಂದದ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಅವಕಾಶ ನೀಡದೆ, ಕೇವಲ ‘ಸಿ’ ಮತ್ತು ‘ಡಿ’ ವೃಂದಕ್ಕೆ ಸೀಮಿತಗೊಳಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಆದಿವಾಸಿ ಅರಣ್ಯ ಮೂಲ ಬುಡಕಟ್ಟು ಹಸಲರು (S.T) ಕ್ಷೇಮಾಭಿವೃದ್ಧಿ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಎಂ.ಸಿ. ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದ್ದು, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು 2025-26ನೇ ಸಾಲಿನ ಬಜೆಟ್‌ನ ಕಂಡಿಕೆ 199ರ ಅನ್ವಯ, ಕಾಡು ಮತ್ತು ಕಾಡಿನಂಚಿನಲ್ಲಿ ವಾಸಿಸುವ ಹಸಲರು, ಬೆಟ್ಟ ಕುರುಬ, ಜೇನು ಕುರುಬ, ಸೋಲಿಗ, ಇರುಳಿಗ ಸೇರಿದಂತೆ 13 ಬುಡಕಟ್ಟು ಸಮುದಾಯಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ಆದರೆ, ಪ್ರಸ್ತುತ ಸರ್ಕಾರವು ಕೇವಲ ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಮಾತ್ರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಉನ್ನತ ಹುದ್ದೆಗಳ ಆಶಾಕಿರಣವಾಗಿದ್ದ ‘ಎ’ ಮತ್ತು ‘ಬಿ’ ಶ್ರೇಣಿಯ ಹುದ್ದೆಗಳನ್ನು ಕೈಬಿಟ್ಟಿರುವುದು ಸಮುದಾಯದ ತೀವ್ರ ಬೇಸರಕ್ಕೆ ಕಾರಣವಾಗಿದೆ. ಇದನ್ನು ವಿರೋಧಿಸಿ, ರಾಜ್ಯ 13 ಆದಿವಾಸಿ ಸಮುದಾಯಗಳ ಒಕ್ಕೂಟದ ಸಂಚಾಲಕ ಮುತ್ತಯ್ಯನವರ ಕರೆಯ ಮೇರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಮನವಿ ಸಲ್ಲಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಅದರ ಅಂಗವಾಗಿ ಶಿವಮೊಗ್ಗದಲ್ಲೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಸಮುದಾಯದ ಪೌಷ್ಟಿಕ ಆಹಾರ (ಫುಡ್ ಕಿಟ್) ವಿತರಣೆ ವಿಳಂಬದ ಬಗ್ಗೆ ಸ್ಪಷ್ಟನೆ ನೀಡಿದ ಸಂಘದ ಪದಾಧಿಕಾರಿಗಳು, ಸರ್ಕಾರಿ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಬಾಕಿ ಇರುವುದರಿಂದ ವಿಳಂಬವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯ ನಿರ್ದೇಶಕರ ಜೊತೆ ಚರ್ಚಿಸಲಾಗಿದ್ದು, ಟೆಂಡರ್ ಮುಗಿದ ತಕ್ಷಣವೇ ಸತತ 12 ತಿಂಗಳ ಕಾಲ ಪೌಷ್ಟಿಕ ಆಹಾರ ವಿತರಣೆಯಾಗಲಿದೆ ಎಂದು ತಿಳಿಸಿದರು.

ಜೊತೆಗೆ, ಸರ್ಕಾರಿ ಕೆಲಸ ಕೊಡಿಸುವುದಾಗಿ ಅಥವಾ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸುವುದಾಗಿ ಯಾರಾದರೂ ಹಣ ಕೇಳಿದರೆ, ಅಂತವರ ಮಾತುಗಳನ್ನು ನಂಬಬೇಡಿ ಎಂದು ಸಂಘ ಎಚ್ಚರಿಕೆ ನೀಡಿದೆ. ನೇಮಕಾತಿಗಳು ಕೇವಲ ಆನ್‌ಲೈನ್ ಹಾಗೂ ನೇರ ಸಂದರ್ಶನದ ಮೂಲಕ ಪಾರದರ್ಶಕವಾಗಿ ನಡೆಯಲಿವೆ. ಹಾಗೆಯೇ, ಸಂಘದಿಂದ ಸಲ್ಲಿಸಲಾಗಿದ್ದ ವಸತಿ ಫಲಾನುಭವಿಗಳ ಪಟ್ಟಿ ಈಗಾಗಲೇ ಸಂಪೂರ್ಣವಾಗಿ ಅನುಮೋದನೆಗೊಂಡಿದ್ದು, ಇಲ್ಲಿ ಯಾವುದೇ ಆರ್ಥಿಕ ವ್ಯವಹಾರಕ್ಕೆ ಆಸ್ಪದವಿಲ್ಲ ಎಂದು ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವೇಶ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು, ಸಮುದಾಯದ ಮುಖಂಡರು ಹಾಗೂ ವಿದ್ಯಾವಂತ ಯುವಕ-ಯುವತಿಯರು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಬರಹ: Chetandas Hosamane

Leave a Comment