ಹೊಸನಗರ ಬಕ್ರೀದ್ ಹಬ್ಬದ ಆಚರಣೆ: ಜಾಮಿಯಾ ಮಸೀದಿಯಲ್ಲಿ ವಿಶೇಷ ನಮಾಝ್, ಪ್ರಾರ್ಥನೆ

Photo of author

By vishwachetana807@gmail.com

​ಹೊಸನಗರ: ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಪ್ರವಾದಿ ಇಬ್ರಾಹಿಂರವರ ತ್ಯಾಗ-ಬಲಿದಾನದ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್ ಅದ್‌ಹಾʼ. ಭಾರತದಲ್ಲಿ ಈ ಹಬ್ಬವನ್ನು ಪವಿತ್ರ ಬಕ್ರೀದ್‌ ಎಂಬ ಹೆಸರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಕಳೂರು ಜುಮ್ಮಾ ಮಸೀದಿ (ಜಾಮಿಯಾ ಮಸೀದಿ)ಯ ಖತೀಬರಾದ ಜನಾಬ್ ಮುಹಮ್ಮದ್ ರಿಹಾನ್ ರವರು ತಿಳಿಸಿದರು.

​ಹೊಸನಗರ ಟೌನ್‌ನಲ್ಲಿರುವ ಜಾಮಿಯಾ ಮಸೀದಿಯ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ನಮಾಜ್‌ನ ಖುತ್ಬಾ ನಂತರದ ಉಪದೇಶದಲ್ಲಿ ಅವರು ಮಾತನಾಡಿದರು. “ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಹಾಗೂ ಸಹೋದರತ್ವ ಬೆಳೆಸಿಕೊಳ್ಳುವುದು ಈ ಹಬ್ಬದ ಪ್ರಮುಖ ಸಂದೇಶವಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.

​”ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುವಿನ ಆದೇಶದಂತೆ ತಮ್ಮ ಪ್ರೀತಿಯ ಏಕೈಕ ಪುತ್ರ ಹಜರತ್ ಇಸ್ಮಾಯಿಲ್ ರವರನ್ನು ಬಲಿ ನೀಡಲು ಸಿದ್ಧರಾದ ಸಂದರ್ಭದ ಅವರ ತ್ಯಾಗವನ್ನು ನೆನಪಿಸುವುದು ಈ ಹಬ್ಬದ ವೈಶಿಷ್ಟ್ಯ. ಅಲ್ಲದೆ, ಸೌದಿ ಅರೇಬಿಯಾದ ಮಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುವ ಸಮಯದಲ್ಲೇ ಈ ಹಬ್ಬ ಆಚರಿಸಲಾಗುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತವೆ,” ಎಂದು ವಿವರಿಸಿದರು.

​ಬಳಿಕ ಸರ್ವರಿಗೂ ಬಕ್ರೀದ್ ಶುಭಾಶಯ ಕೋರಿದ ಅವರು, ಜಗತ್ತಿನಾದ್ಯಂತ ನೆಮ್ಮದಿ, ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಜೊತೆಗೆ, ಪವಿತ್ರ ಹಜ್ ಯಾತ್ರೆಯಲ್ಲಿರುವ ತಮ್ಮ ಜಮಾತಿನ ಎಲ್ಲಾ ಸದಸ್ಯರು ಮತ್ತು ಅವರೊಂದಿಗೆ ತೆರಳಿರುವ ಎಲ್ಲಾ ಹಜ್ ಯಾತ್ರಿಕರ ಸುಖಾಗಮನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಹಳೆ ಸಾಗರ ರಸ್ತೆಯಲ್ಲಿ ಈದ್ ನಮಾಝ್ ನಿರ್ವಹಿಸಲು ಪೂರ್ವ ನಿಗದಿಯಾಗಿತ್ತು. ಆದರೆ, ಮಳೆಯ ಕಾರಣ ನಮಾಝ್ ಅನ್ನು ಮಸ್ಜಿದ್‌ನಲ್ಲಿಯೇ ನಿರ್ವಹಿಸಲಾಯಿತು.

​ಆಡಳಿತ ಕಮಿಟಿಯ ಬಹುತೇಕ ಎಲ್ಲಾ ಪದಾಧಿಕಾರಿಗಳು, ಜಮಾತಿನ ಸದಸ್ಯರು, ಸಮುದಾಯದ ಮುಖಂಡರು, ಯುವಕರು ಮತ್ತು ಪುಟಾಣಿ ಮಕ್ಕಳು ಪರಸ್ಪರ ಆಲಂಗಿಸಿಕೊಳ್ಳುವುದರ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಬರಹ: Chetandas Hosamane

Leave a Comment