Hosanagara: ಆಯುರ್ವೇದ ವಿಭಾಗದ ರ್‍ಯಾಂಕ್ ವಿಜೇತ ಡಾ. ಸಂಜನಾ ಎಸ್ ರಾವ್ ಗೆ ಸನ್ಮಾನ : ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯಿಂದ ಸಾಧಕಿಗೆ ಅಭಿನಂದನೆ

Photo of author

By vishwachetana807@gmail.com

ಹೊಸನಗರ: ಏನೂ ಅರಿಯದ ಮುಗ್ಧ ಮನಸ್ಸಿನ ವಿದ್ಯಾರ್ಥಿಗಳ ಜೀವನಕ್ಕೆ ಸ್ಪಷ್ಟ ರೂಪ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕಾಯಕ ಶಿಕ್ಷಕ ಹಾಗೂ ಪೋಷಕ ವರ್ಗದ್ದಾಗಿದೆ. ವಿದ್ಯಾರ್ಥಿಗಳು ನಯ,ವಿನಯ, ಸಂಸ್ಕಾರ ರೂಡಿಸಿಕೊಳ್ಳುವ ಮೂಲಕ ಮಹತ್ವದ ಸಾಧನೆ ಮಾಡಲು ಸಾಧ್ಯವಿದೆ ಎಂದು ಡಾ. ಸಂಜನಾ ಎಸ್ ರಾವ್ ತಿಳಿಸಿದರು.
ಪಟ್ಟಣದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಾವು ಈ ಶಾಲೆಯ ಹಳೇ ವಿದ್ಯಾರ್ಥಿನಿ ಆಗಿದ್ದು, ತಮ್ಮ ಈ ಸಾಧನೆಗೆ ಶಾಲೆಯ ಅಂದಿನ ಶಿಕ್ಷಕ ವರ್ಗವೇ ಪ್ರೇರಣೆ ಎಂದು ನೆನಪು ಮೆಲುಕು ಹಾಕಿದರು.

ಸಾಗರ ತಾಲೂಕಿನ ಎಂ.ಎಲ್.ಹಳ್ಳಿ ರಾಮಕೃಷ್ಣ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಸರಿತ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಮೂಲಕ ತಮ್ಮ ಶಿಕ್ಷಕರೊಂದಿಗೆ ವೇದಿಕೆ ಹಂಚಿಕೊಳ್ಳವುದು ಸಾಧಕರಲ್ಲಿ ಸಾರ್ಥಕ ಭಾವ ಮೂಡಿಸುತ್ತದೆ. ಇಂತಹ ಹಲವು ಕಾರ್ಯಕ್ರಮಗಳು ಈ ಶಾಲೆಯಲ್ಲಿ ಹಮ್ಮಿಕೊಳ್ಳಲು ವಿದ್ಯಾರ್ಥಿಗಳ ಸಾಧನೆಯೇ ಕಾರಣ. ಇದು ಇತರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಧನೆಗೆ ಪ್ರೇರಣೆ ನೀಡುತ್ತದೆ ಎಂದರು.

ರಾಮಕೃಷ್ಣ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಿ.ಎಂ.ದೇವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲೇ ಮಹಾತ್ಮರ ಆದರ್ಶಗಳನ್ನು ರೂಢಿಸಿಕೊಂಡು ಸಾಧನೆಯ ಮೂಲಕ ಸಾರ್ಥಕ ಜೀವನ ಸಾಗಿಸಬೇಕು. ಪರೋಪಕಾರಿಯಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಸ್ವಚ್ಛ, ಸುಂದರ, ಪ್ರಾಮಾಣಿಕ ಜೀವನ ನಡೆಸುವ ಮೂಲಕ ಮಾದರಿಯಾಗಬೇಕು. ಈ ಶಾಲೆಯ ಹಳೇ ವಿಧ್ಯಾರ್ಥಿನಿ ಡಾ. ಸಂಜನಾ ಎಸ್ ರಾವ್, ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯವು ನಡೆಸುವ ಆಯುರ್ವೇದ ವಿಭಾಗದ ಪರೀಕ್ಷೆಯಲ್ಲಿ ಪ್ರತಿವರ್ಷ ಅತ್ಯುನ್ನತ ಶ್ರೇಣಿ ಪಡೆದು, ಅಂತಿಮವಾಗಿ ಐದು ಚಿನ್ನದ ಪದಕ ಪಡೆಯುವ ಮೂಲಕ ಊರಿನ ಕೀರ್ತಿ ಹೆಚ್ಚಿಸಿದ್ದಾರೆ. ಆ ಕಾರಣಕ್ಕೆ ಶಾಲೆ ಅವರ ಸಾಧನೆಯನ್ನು ಅಭಿನಂದಿಸಿದೆ ಎಂದರು. ವೇದಿಕೆಯಲ್ಲಿ ಸಾಧಕಿಯ ಪೋಷಕರಾದ ಕೋಡೂರಿನ ಶಶಿಧರ್ ಮತ್ತು ತಾಯಿ ದೀಪ ಉಪಸ್ಥಿತರಿದ್ದರು.

ಕುಮಾರಿ ಶ್ರೇಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ರಾಜೇಶ್ ಸ್ವಾಗತಿಸಿದರು. ಅಶ್ವಿನಿ ನಿರೂಪಿಸಿ, ಸುಮಂತ್ ವಂದಿಸಿದರು.

ಬರಹ: Chetandas Hosamane

Leave a Comment