Hosanagara: ಜೂನ್ 25ರ ಬಳಿಕ ಕಾಂಗ್ರೆಸ್ 2ನೇ ಪಟ್ಟಿ: ಮಹತ್ವದ ಸ್ಥಾನದ ನಿರೀಕ್ಷೆಯಲ್ಲಿ ಶಾಸಕ  ಬೇಳೂರು

Photo of author

By vishwachetana807@gmail.com

ಹೊಸನಗರ: ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಇಂದು ಹೊಸನಗರದ ಶಾಸಕರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಸ್ತುತ ರಾಜಕೀಯ ವಿದ್ಯಮಾನಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ತಾವು ನಿರೀಕ್ಷಿಸುತ್ತಿರುವ ಸ್ಥಾನಮಾನದ ಕುರಿತು ಮುಕ್ತವಾಗಿ ಮಾತನಾಡಿದ ಶಾಸಕರು, “ಈಗಾಗಲೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವರಿಷ್ಠರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದೇನೆ. ರಾಜ್ಯದಲ್ಲಿ ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದ ಕಾಂಬಿನೇಷನ್‌ನಲ್ಲಿ ನಮಗೆ ಖಂಡಿತವಾಗಿಯೂ ಉತ್ತಮ ಅವಕಾಶ ಸಿಗುವ ಪೂರ್ಣ ಭರವಸೆ ಇದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ದೆಹಲಿಗೆ ಹೋಗುವುದು, ವರಿಷ್ಠರನ್ನು ಭೇಟಿಯಾಗುವುದು ಸಹಜ ಪ್ರಕ್ರಿಯೆಯಾಗಿದ್ದು, ನಾಡಿದ್ದು ತಾವು ಮತ್ತೊಮ್ಮೆ ದೆಹಲಿ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.

​ಮುಂಬರುವ ಚುನಾವಣೆಯ ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಅವರು, ಬಹುಶಃ 25ನೇ ತಾರೀಖಿನ ನಂತರ ಈ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು. ಇದೇ ವೇಳೆ, “ಎರಡನೇ ಪಟ್ಟಿಯಲ್ಲಿ ನಿಮ್ಮ ಹೆಸರೇ ಇರುತ್ತದೆಯೆ?” ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಾಸಕರು ನಗುತ್ತಲೇ “ನಿಮ್ಮ ಬಾಯಿಗೆ ಸಕ್ಕರೆ ಬೀಳಲಿ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದು, ಗೋಷ್ಠಿಯಲ್ಲಿ ಲವಲವಿಕೆಯ ವಾತಾವರಣ ಮೂಡಿಸಿತು.

ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಬಗ್ಗೆಯೂ ಮಾತನಾಡಿದ ಅವರು, ಪಟ್ಟಣದ ಮೇಲ್ಚಾವಣಿ (ರೂಫಿಂಗ್) ಕಾಮಗಾರಿಗೆ ಈಗಾಗಲೇ ಹಣ ಕಾಯ್ದಿರಿಸಲಾಗಿದ್ದು, ವ್ಯವಸ್ಥಿತವಾಗಿ ಕೆಲಸ ನಡೆಯಲಿದೆ. ಅಧಿಕಾರಿಗಳು ಮತ್ತು ಸಾರ್ವಜನಿಕರು ಕೆಲ ದಿನಗಳ ಕಾಲ ತಾಳ್ಮೆಯಿಂದ ಇರಬೇಕು ಎಂದು ವಿನಂತಿಸಿದರು. ಫುಡ್ ಕೋರ್ಟ್ ನಿರ್ಮಾಣದ ವಿವಾದದ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿದ ಶಾಸಕರು, “ಆ ಜಾಗ ಪಟ್ಟಣ ಪಂಚಾಯಿತಿಗೆ ಸೇರಿದ್ದಾಗಿದ್ದು, ಬಡ ವ್ಯಾಪಾರಿಗಳ ಹಿತದೃಷ್ಟಿಯಿಂದ ಈ ಯೋಜನೆಯನ್ನು ತರಲಾಗಿದೆ. ಇದನ್ನು ತಡೆಯಲು ಯಾರು ಎಷ್ಟೇ ರಾಜಕೀಯ ತಂತ್ರಗಳನ್ನು ಮಾಡಿದರೂ ಬಿಡುವುದಿಲ್ಲ. ಇದಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಿ ಬಂದರೂ ಸರಿ, ಬಡವರಿಗೆ ನ್ಯಾಯ ಕೊಡಿಸಿಯೇ ತೀರುತ್ತೇನೆ” ಎಂದು ಗುಡುಗಿದರು.

ಇದೇ ಸಂದರ್ಭದಲ್ಲಿ, ನಗರೋತ್ಥಾನ ಹಂತ-4ರ ಯೋಜನೆಯಡಿ ಕಳೆದ ಜನವರಿ ತಿಂಗಳಲ್ಲಿ 14 ಬಡ ಮಕ್ಕಳಿಗೆ ನೀಡಲಾಗಿದ್ದ ತಲಾ 6,000 ರೂಪಾಯಿ ಆರ್ಥಿಕ ಸಹಾಯಧನದ ಚೆಕ್‌ಗಳು ಆರು ತಿಂಗಳಾದರೂ ನಗದಾಗದೆ (Cash ಆಗದೆ) ಬಡ ಕುಟುಂಬಗಳು ಅನುಭವಿಸುತ್ತಿರುವ ತೊಂದರೆಯನ್ನು ಮಾಧ್ಯಮ ಪ್ರತಿನಿಧಿಗಳು ಶಾಸಕರ ಗಮನಕ್ಕೆ ತಂದರು. ಬ್ಯಾಂಕ್ ಖಾತೆ ಹೋಲ್ಡ್ ಆಗಿರುವುದರಿಂದ ಮಕ್ಕಳಿಗೆ ಹಣ ಸಿಗದಿರುವುದು ಮಾತ್ರವಲ್ಲದೆ, ಅವರ ಖಾತೆಯಿಂದಲೇ ಉಲ್ಟಾ 200 ರೂಪಾಯಿ ಕಡಿತವಾಗಿರುವ ಬ್ಯಾಂಕ್ ದಾಖಲೆಗಳನ್ನು ಶಾಸಕರು ಪರಿಶೀಲಿಸಿದರು. ಈ ಬಗ್ಗೆ ತಕ್ಷಣವೇ ಸ್ಪಂದಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಬಡಮಕ್ಕಳ ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರು ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ಬರಹ: Chetandas Hosamane

Leave a Comment