ಹೊಸನಗರ: ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಜನ್ಮದಿನದ ಅಂಗವಾಗಿ, ಹೊಸನಗರ ತಾಲೂಕಿನ ಸಮಾಜಸೇವಕರು ಹಾಗೂ ವಕೀಲರಾದ ಮೋಹನ್ ಶೆಟ್ಟಿ ಮತ್ತು ಅವರ ತಂಡದವರು ವಿಭಿನ್ನವಾಗಿ ಜನ್ಮದಿನವನ್ನು ಆಚರಿಸಿದ್ದಾರೆ.
ಸಾಮಾನ್ಯವಾಗಿ ಜನ್ಮದಿನದ ಆಚರಣೆಗಳು ಕೇಕ್ ಕತ್ತರಿಸುವುದು ಅಥವಾ ಸಭೆ ಸಮಾರಂಭಗಳಿಗೆ ಸೀಮಿತವಾಗಿದ್ದರೆ, ಮೋಹನ್ ಶೆಟ್ಟಿ ಮತ್ತು ಅವರ ತಂಡದವರು ‘ಶ್ರಮದಾನ’ದ ಮೂಲಕ ಮಾದರಿಯಾಗಿದ್ದಾರೆ. ಮತ್ತಿಕೈಯಿಂದ ಮಾಡೋಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಂಚುಗಳಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆರವುಗೊಳಿಸಿ, ಕಸವನ್ನು ವಿಲೇವಾರಿ ಮಾಡುವ ಮೂಲಕ ರಸ್ತೆಯನ್ನು ಸುಸ್ಥಿತಿಗೆ ತಂದಿದ್ದಾರೆ.


ಮಳೆಗಾಲದ ಸಮಯದಲ್ಲಿ ರಸ್ತೆಯ ಬದಿಗಳಲ್ಲಿ ಬೆಳೆಯುವ ಗಿಡಗಂಟಿಗಳು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಸ್ವಯಂಪ್ರೇರಿತರಾಗಿ ಈ ಸ್ವಚ್ಛತಾ ಕಾರ್ಯ ಕೈಗೊಂಡ ತಂಡದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಮಾಜಮುಖಿ ಕಾರ್ಯದಲ್ಲಿ ಮೋಹನ್ ಶೆಟ್ಟಿ ಅವರೊಂದಿಗೆ ವೆಂಕಟರಮಣ ಭಟ್, ನಾಗರಾಜ, ವಿಜೇಂದ್ರ, ಮಹೇಶ್ ಮತ್ತು ನಾರಾಯಣ ಅವರು ಕೈಜೋಡಿಸಿ ಯಶಸ್ವಿಗೊಳಿಸಿದರು.

“ನಮ್ಮ ನೆಚ್ಚಿನ ನಾಯಕರ ಜನ್ಮದಿನವನ್ನು ಸಮಾಜಕ್ಕೆ ಹಿತಕರವಾದ ಕಾರ್ಯದ ಮೂಲಕ ಆಚರಿಸುತ್ತಿರುವುದು ನಮಗೆ ಸಂತಸ ತಂದಿದೆ” ಎಂದು ಮೋಹನ್ ಶೆಟ್ಟಿ ತಿಳಿಸಿದ್ದಾರೆ. ಈ ಕಾರ್ಯವು ಕೇವಲ ಸ್ವಚ್ಛತೆಗೆ ಮಾತ್ರವಲ್ಲದೆ, ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂಬ ಸಂದೇಶವನ್ನೂ ಸಾರಿದೆ.

ಬರಹ: Chetandas Hosamane









