ಹೊಸನಗರ ತಾಲೂಕಿನ ರಾಮಚಂದ್ರಪುರ ಗ್ರಾಪಂ ವ್ಯಾಪ್ತಿಯ ಜಯನಗರ–ಸಿಂಗಪುರ ರಸ್ತೆಗೆ ಯುವಕರ ತಂಡದಿಂದ ಮರುಜೀವ

ಹೊಸನಗರ: ಈ ಬಾರಿ ಮುಂಗಾರು ಮಳೆ ಕುಂಠಿತಗೊಂಡು ರೈತಾಪಿ ವರ್ಗ ಸೇರಿದಂತೆ ರಾಜ್ಯ ವ್ಯಾಪ್ತಿ ಕುಡಿಯುವ ನೀರಿಗೂ ಮುಂಬರುವ ದಿನಗಳಲ್ಲಿ ಭಾರೀ ತೊಂದರೆ ಉಂಟಾಗುವ ಆತಂಕ ಜನರಲ್ಲಿ ಮನೆಮಾಡಿತ್ತು.
ಆದರೆ, ಏಕಾಏಕಿ ಕಳೆದ ಕೆಲವು ದಿನಗಳಿಂದ ಮಲೆನಾಡು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯಲು ಆರಂಭಿಸಿದೆ. ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಅಂತೆಯೇ, ಕುಡಿಯುವ ನೀರಿನ ಆಭಾವ ನೀಗಿಸುವ ಸುಳಿವನ್ನು ಫ್ರಕೃತಿ ನೀಡಿದಂತಿದೆ.


ಕರಾವಳಿ ಭಾಗ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಹಲವು ಅವಘಡಗಳು ಸಂಭವಿಸಿದ ವರದಿಯಾಗಿವೆ. ಹೊಸನಗರ
ತಾಲೂಕು ಸಹ ಇಂತಹ ಅವಘಡಗಳಿಂದ ಹೊರತಾಗೆನೂ ಉಳಿದಿಲ್ಲ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ತಾಲೂಕಿನ ರಾಮಚಂದ್ರಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾಮುಂಡಿ ಬೆಟ್ಟದ ಎದುರು ಹಾದು ಹೋಗುವ ಜಯನಗರ ಹಾಗೂ ಸಿಂಗಪುರ, ಖಬರ್ ಸ್ಥಾನ್ ರಸ್ತೆ ಸಂಪೂರ್ಣ ಹಾಳಾಗಿತ್ತು. ಸುಮಾರು ಮೂವತ್ತು ವಾಸದ ಮನೆಗಳಿರುವ ಈ ಭಾಗದಲ್ಲಿ ಸಂಚಾರಕ್ಕೆ ಅಡ್ಡಿಯಾಗಿತ್ತು. ವಯೋವೃದ್ದರು, ಅನಾರೋಗ್ಯ ಪೀಡಿತರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಬಗೆಯ ವಾಹನ ಸಂಚಾರ ನಡೆಸುವುದೇ ಕಷ್ಟಸಾಧ್ಯವಾಗಿತ್ತು. ಈ ಹಿಂದೆ ಗ್ರಾಮ ಪಂಚಾಯತಿ ಅನುದಾನದಲ್ಲಿ ಈ ಮಣ್ಣಿನ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಲ್ಲಿ ಸುರಿದ ಭಾರೀ ಮಳೆಗೆ ರಸ್ತೆ ಮತ್ತೊಮ್ಮೆ ಸಂಪೂರ್ಣ ಕೊಚ್ಚಿಹೋಗಿ, ಸಾರ್ವಜನಿಕರ ಸಂಚಾರ ಅಸಾಧ್ಯ ವಾಗಿ ಪರಿಣಮಿಸಿತ್ತು. ಈ ವಿಷಯ ಮನಗಂಡ ಸ್ಥಳೀಯ ಯುವ ಉತ್ಸಾಹಿ, ಸಮಾಜಸೇವಕ ಸುನೀಲ್ ಸಮಸ್ಯೆ ಪರಿಹರಿಸಲು ಸ್ವತಃ ಮುಂದಾಗಿ, ಸಮಾನ ಮನಸ್ಕರೊಂದಿಗೆ ಸೇರಿ ರಸ್ತೆ ದುರಸ್ತಿಗೆ ಮುಂದಾದರು. ಸ್ನೇಹಿತರ ಸಹಕಾರದೊಂದಿಗೆ ರಸ್ತೆ ದುರಸ್ತಿಗೆ ಅಗತ್ಯ ಹಣ ಖರ್ಚು ಮಾಡಿ, ಜಲ್ಲಿ ಕಲ್ಲು, ಮಣ್ಣು, ಟಿಪ್ಪರ್,ಟ್ರಾಕ್ಟರ್ ಸೇರಿದಂತೆ ಹಲವು ಸಾಧನಗಳನ್ನು ಬಳಸಿಕೊಂಡು ರಸ್ತೆ ಸಮತಟ್ಟು ಮಾಡಿ ಸಂಚಾರಕ್ಕೆ ಯೋಗ್ಯ ರಸ್ತೆ ಮರು ನಿರ್ಮಾಣಕ್ಕೆ ಮುಂದಾಗಿದ್ದು ಸ್ಥಳೀಯ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು. ಯುವಕ ಸುನೀಲ್ ಅವರ ಕಾರ್ಯವೈಖರಿಗೆ ಸ್ಥಳೀಯ ಮುಖಂಡರು ಶ್ಲಾಘನೆ ವ್ಯಕ್ತಪಡಿಸಿದ್ದು, ಯುವ ಸಮೂಹಕ್ಕೆ ಇದೊಂದು ಮಾದರಿ ಕೆಲಸ ಎಂಬ ಇಚ್ಛೆ ವ್ಯಕ್ತಪಡಿಸಿರುವ ಅವರು ಗ್ರಾಮಾಭಿವೃದ್ದಿ ಕಾರ್ಯಗಳಲ್ಲಿ ಯುವಕರು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಬರಹ: Chetandas Hosamane ವರದಿ : ಶ್ರೀಕಂಠ ಹೆಚ್.ಆರ್. ಹೊಸನಗರ









