ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ಮತ್ತೆ ಪೊಲೀಸರ ಬಲೆಗೆ

Photo of author

By vishwachetana807@gmail.com

ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಪರಾರಿಯಾಗಿದ್ದ ವೆಂಕಟೇಶ್ ಬಂಧನ; ಮತ್ತೆ ನ್ಯಾಯಾಂಗ ಬಂಧನಕ್ಕೆ

 

ಹೊಸನಗರ, ಆ.2: ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಪರಾರಿಯಾಗಿದ್ದ ಆರೋಪಿಯನ್ನು ಹೊಸನಗರ ಪೊಲೀಸರು ಭಾನುವಾರ ಬೆಳಗ್ಗೆ ಆತನ ಮನೆಯ ಸಮೀಪ ಬಂಧಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಯನ್ನು ತಾಲೂಕಿನ ಅಡುಗೋಡಿ ಗ್ರಾಮದ ವೆಂಕಟೇಶ್ (36), ಪುಟ್ಟಪ್ಪ ಅವರ ಪುತ್ರ ಎಂದು ಗುರುತಿಸಲಾಗಿದೆ. 2019-20ರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಮುಂದಾಗಿದ್ದ ಪ್ರಕರಣದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಜುಲೈ 15ರಂದು ಆರೋಪಿಯನ್ನು ಹೊಸನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಆರೋಪಿಯನ್ನು ಜೀಪಿನಲ್ಲಿ ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಹೋಟೆಲ್‌ವೊಂದರ ಬಳಿ ಹಸಿವಾಗಿದೆ ಎಂದು ತಿಳಿಸಿದ್ದ. ಈ ವೇಳೆ ಉಪವಲಯ ಅರಣ್ಯಾಧಿಕಾರಿ ಇಬ್ರಾಹಿಂ ಹಾಗೂ ಅರಣ್ಯ ವೀಕ್ಷಕ ಅಯಾನ್ ಬಡೆಬಾಯಿ ಆರೋಪಿಗೆ ಆಹಾರ ತರಲು ತೆರಳಿದ್ದರು. ಇದನ್ನು ಸದುಪಯೋಗಪಡಿಸಿಕೊಂಡ ಆರೋಪಿ ಜೀಪಿನಲ್ಲಿದ್ದ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಚಕ್ರಪಾಣಿ ಹಾಗೂ ವಾಹನ ಚಾಲಕ ನಾಗೇಂದ್ರ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಈ ಸಂಬಂಧ ಕೊಲ್ಲೂರು ವನ್ಯಜೀವಿ ವಲಯದ ಕಟ್ಟಿನಹೊಳೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸುನೀಲ್ ಡಿ. ಕುಂಬಾರ್ ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಭಾನುವಾರ ಬೆಳಗ್ಗೆ ಆತನ ಮನೆಯ ಸಮೀಪ ಪತ್ತೆಹಚ್ಚಿ ಬಂಧಿಸಿದ್ದಾರೆ. ಬಳಿಕ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿಪಿಐ ಗೌಡಪ್ಪಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಶಂಕರಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಶಿವಕುಮಾರ, ಸುನೀಲ್, ರಾಘವೇಂದ್ರ ಮತ್ತು ಮಂಜುನಾಥ್ ಭಾಗವಹಿಸಿದ್ದರು.

ಬರಹ: Chetandas Hosamane

Leave a Comment