ಸ್ಪಷ್ಟ ಮಾಹಿತಿ ನೀಡದ ಕಾರಣಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಏಜೆಂಟ್ಗಳು.

ಹೊಸನಗರ: ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಎಸ್ಐಆರ್ (SIR) ಕುರಿತು ಬಿ.ಎಲ್.ಎ (ಬೂತ್ ಮಟ್ಟದ ಏಜೆಂಟ್) ಗಳಿಗೆ ಮಾಹಿತಿ ನೀಡಲು ಕರೆಯಲಾಗಿದ್ದ ಸಭೆಯಲ್ಲಿ ಇಲಾಖಾ ಸಿಬ್ಬಂದಿಗಳ ನಿರ್ಲಕ್ಷ್ಯ ಖಂಡಿಸಿ, ಏಜೆಂಟ್ಗಳು ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ಬುಧವಾರ ನಡೆದಿದೆ. ಅಧಿಕಾರಿಗಳ ಪೂರ್ವಸಿದ್ಧತೆಯಿಲ್ಲದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿ.ಎಲ್.ಎ ಗಳು ಮಾಹಿತಿ ಕೇಂದ್ರದಲ್ಲಿ ವಾಗ್ವಾದ ನಡೆಸಿದರು.


ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಮತದಾರರ ಪಟ್ಟಿ ಪರಿಷ್ಕರಣೆಯಂತಹ ಮಹತ್ವದ ಪ್ರಕ್ರಿಯೆ ಕುರಿತು ಮಾರ್ಗದರ್ಶನ ನೀಡಲು ಇಲಾಖೆ ವತಿಯಿಂದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ, ಸಭೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗಳು ಪರಿಷ್ಕರಣೆ ಬಗ್ಗೆ ಸರಿಯಾದ ಮತ್ತು ಸ್ಪಷ್ಟ ಮಾಹಿತಿ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರಮುಖ ವಿಚಾರಗಳನ್ನು ಬರೆದುಕೊಳ್ಳಲು ಅಗತ್ಯವಾದ ಕನಿಷ್ಠ ಮೂಲಸೌಕರ್ಯಗಳಾದ ನೋಟ್ ಪ್ಯಾಡ್, ಪೆನ್ ಹಾಗೂ ಮಾಹಿತಿ ಒಳಗೊಂಡ ಯಾವುದೇ ಕರಪತ್ರಗಳನ್ನು ಒದಗಿಸದೆ ಅಧಿಕಾರಿಗಳು ಅಸಡ್ಡೆ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.

ಯಾವುದೇ ಪೂರ್ವಸಿದ್ಧತೆ ಹಾಗೂ ಸಮರ್ಪಕ ಮಾರ್ಗಸೂಚಿಗಳಿಲ್ಲದೆ ಸಭೆ ಕರೆದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿ.ಎಲ್.ಎ ಗಳು, “ಯಾವುದೇ ಲಿಖಿತ ಮಾಹಿತಿಯೇ ಇಲ್ಲದೆ ನಾವು ಬೂತ್ ಮಟ್ಟದಲ್ಲಿ ಜನರಿಗೆ ಉತ್ತರಿಸುವುದು ಮತ್ತು ಕೆಲಸ ಮಾಡುವುದಾದರೂ ಹೇಗೆ?” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕೆಲಕಾಲ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ನಂತರ, ಇಲಾಖೆಯ ಈ ಬೇಜವಾಬ್ದಾರಿ ಕಾರ್ಯವೈಖರಿಯನ್ನು ಖಂಡಿಸಿ ಹಲವಾರು ಬಿ.ಎಲ್.ಎ ಗಳು ಸಭೆಯಿಂದ ಸಾಮೂಹಿಕವಾಗಿ ಹೊರನಡೆದರು.
ಚುನಾವಣಾ ಆಯೋಗದ ಇಂತಹ ಮಹತ್ವದ ಪ್ರಕ್ರಿಯೆಯಲ್ಲಿ ತಾಲೂಕು ಮಟ್ಟದ ಸಿಬ್ಬಂದಿ ತೋರಿರುವ ಈ ನಿರ್ಲಕ್ಷ್ಯ ತೀವ್ರ ಟೀಕೆಗೆ ಗುರಿಯಾಗಿದೆ. ತಕ್ಷಣವೇ ತಹಶೀಲ್ದಾರ್ ಹಾಗೂ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಅಗತ್ಯ ಸಿದ್ಧತೆಗಳು ಮತ್ತು ಸಂಪೂರ್ಣ ಮಾಹಿತಿಯೊಂದಿಗೆ ಮತ್ತೊಮ್ಮೆ ತರಬೇತಿ ಸಭೆಯನ್ನು ಆಯೋಜಿಸಬೇಕು ಎಂದು ಬಿ.ಎಲ್.ಎ ಗಳು ಒತ್ತಾಯಿಸಿದ್ದಾರೆ.
ಬರಹ: Chetandas Hosamane









