
ಹೊಸನಗರದ ಗಾಂಧಿ ಮಂದಿರದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿ.ಪಂ. ಅಧ್ಯಕ್ಷರಾದ ಕಲಗೋಡು ರತ್ನಾಕರ್ ಅವರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ನೆಪದಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟಿರುವ ಕೇಂದ್ರದ ಮೋದಿ ಹಾಗೂ ಅಮಿತ್ ಶಾ ಸರ್ಕಾರ, ಪ್ರಜಾಪ್ರಭುತ್ವದ ಮೂಲ ಹಕ್ಕಾದ ಮತದಾನದ ಹಕ್ಕನ್ನು ಕಸಿಯಲು ಮುಂದಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.


ಬಿಜೆಪಿ ಮತ್ತು ಆರ್.ಎಸ್.ಎಸ್ ಕೈವಾಡದಿಂದಾಗಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಮತ್ತು ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಪಟ್ಟಿಯಿಂದ ಕೈಬಿಡುವ ಹುನ್ನಾರ ನಡೆಯುತ್ತಿದೆ ಎಂದು ಅವರು ದೂರಿದರು. ಪ್ರಸ್ತುತ ದೇಶದ ೧೧ ರಾಜ್ಯಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ೯೦ ಲಕ್ಷ ಮತಗಳನ್ನು ತೆಗೆದುಹಾಕಿ, ಮೇಲ್ಮನವಿ ನಂತರ ಕೇವಲ ೨೦ ಲಕ್ಷ ಮತದಾರರಿಗೆ ಮಾತ್ರ ಅವಕಾಶ ನೀಡಿದ್ದನ್ನು ಅವರು ಇದೇ ವೇಳೆ ಸ್ಮರಿಸಿದರು.
ಸಾಗರ ಹಾಗೂ ಹೊಸನಗರ ಕ್ಷೇತ್ರಗಳಲ್ಲಿ ಈಗಾಗಲೇ ಶೇ. ೯೫ ರಷ್ಟು ಮ್ಯಾಪಿಂಗ್ ಮುಗಿದಿದ್ದು, ಈ ಪ್ರಕ್ರಿಯೆಯಲ್ಲಿ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ನಿರ್ದಿಷ್ಟವಾಗಿ ಮದುವೆಯಾಗಿ ಗಂಡನ ಮನೆಗೆ ಹೋದ ಮಹಿಳೆಯರ ಮತಗಳನ್ನು ಗುರಿಯಾಗಿಸಿ ತೆಗೆದುಹಾಕಲಾಗುತ್ತಿದ್ದು, ಮಹಿಳೆಯರಿಗೆ ತೀವ್ರ ಅನ್ಯಾಯ ಮಾಡಲಾಗುತ್ತಿದೆ. ತಮ್ಮದೇ ಬೂತ್ ವ್ಯಾಪ್ತಿಯಲ್ಲಿ ಜ್ಯೋತಿ ಕುಮಾರಿ ಎಂಬುವವರ ಫೋಟೋ ಅದಲು-ಬದಲಾಗಿರುವ ಹಾಗೂ ಸ್ವತಃ ತಮ್ಮ ಪತ್ನಿ ಮತ್ತು ತಾಯಿಯ ಮಾಹಿತಿಯಲ್ಲೇ ವ್ಯತ್ಯಾಸವಾಗಿರುವ ನೈಜ ಉದಾಹರಣೆಗಳನ್ನು ಅವರು ಪತ್ರಕರ್ತರ ಮುಂದಿಟ್ಟರು.
ಈ ವ್ಯವಸ್ಥಿತ ಅನ್ಯಾಯವನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಶಿವಮೊಗ್ಗ ಜಿಲ್ಲಾ ಮಟ್ಟದಲ್ಲಿ ಇದರ ಉಸ್ತುವಾರಿ ನೋಡಿಕೊಳ್ಳಲು ಕಿಮ್ಮನೆ ರತ್ನಾಕರ್, ಬಲ್ಕೀಶ್ ಬಾನು ಹಾಗೂ ತಮ್ಮನ್ನೊಳಗೊಂಡ ಮೂವರ ಸಮಿತಿಯನ್ನು ರಚಿಸಲಾಗಿದೆ. ಶಿಕಾರಿಪುರ, ಸೊರಬ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಸಾಗರ, ಭದ್ರಾವತಿ ಸೇರಿದಂತೆ ಜಿಲ್ಲೆಯಾದ್ಯಂತ ವೀಕ್ಷಕರನ್ನು ಹಾಗೂ ಬೂತ್ ಮಟ್ಟದಲ್ಲಿ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಬಿ.ಎಲ್.ಒ ಗಳು ಹಾಗೂ ಬೂತ್ ಅಧ್ಯಕ್ಷರು ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು ಮತ್ತು ಒಬ್ಬನೇ ಒಬ್ಬ ಅರ್ಹ ಮತದಾರ ತನ್ನ ಹಕ್ಕನ್ನು ಕಳೆದುಕೊಳ್ಳದಂತೆ ಎಚ್ಚರವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋದರೆ ಕೇವಲ ಮತದಾನದ ಹಕ್ಕು ಮಾತ್ರವಲ್ಲದೆ, ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳಾದ ಉಚಿತ ಬಸ್ ಪಾಸ್, ವಿದ್ಯುತ್ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನೂ ಸಾರ್ವಜನಿಕರು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಜನತೆಗೆ ಗಂಭೀರ ಎಚ್ಚರಿಕೆ ನೀಡಿದರು. ಒಟ್ಟಾರೆಯಾಗಿ ಕೇಂದ್ರದ ಈ ಷಡ್ಯಂತ್ರದ ವಿರುದ್ಧ ಕಾಂಗ್ರೆಸ್ ಪಕ್ಷವು ತಳಮಟ್ಟದಿಂದಲೇ ಹೋರಾಟ ನಡೆಸಲಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಜಿ. ಚಂದ್ರಮೌಳಿ, ಹಿರಿಯ ಮುಖಂಡರಾದ ಪ್ರಭಾಕರ್ ರಾವ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಎಂ.ಪಿ. ಸುರೇಶ್, ಅಶ್ವಿನಿ ಕುಮಾರ್, ಕಳೂರು ಕೃಷ್ಣಮೂರ್ತಿ, ಅಣ್ಣಪ್ಪ ಕೆ. ಮಾವಿನಕೊಪ್ಪ, ಚಂದ್ರಮೂರ್ತಿ ಜಯನಗರ, ಚನ್ನಬಸಪ್ಪ ಜಯನಗರ, ಗುರು ಜಯನಗರ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಬರಹ: Chetandas Hosamane









