
ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಚಿಗೆಬೈಲು, ಮೇಲಿನ ಸಂಪಳ್ಳಿ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ಬೀಳುವ ಹಂತದಲ್ಲಿದ್ದ ದುಸ್ಥಿತಿಯ ಮನೆಯಲ್ಲಿ ವಾಸಿಸುತ್ತಿದ್ದ ವಿಕಲಚೇತನ ತಾಯಿ ಮತ್ತು ಮಗಳಿಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ದಾನಿಗಳ ನೆರವಿನಿಂದ ಸುಮಾರು 6.5 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆಯಲಾಗಿದೆ. ಇಂದು ಈ ನೂತನ ಮನೆಯ ಗೃಹಪ್ರವೇಶವನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.


ಮೇಲಿನ ಸಂಪಳ್ಳಿ ಗ್ರಾಮದ ಶಶಿಕಲಾ ಭೋಜಪ್ಪ ಹಾಗೂ ಅವರ ಮಗಳು ಇಬ್ಬರೂ ವಿಕಲಚೇತನರು. ಮಗಳಿಗೆ ನಡೆಯಲು ಹಾಗೂ ಸರಿಯಾಗಿ ಕೂರಲು ಸಹ ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು. ಈ ಬಡ ಕುಟುಂಬದ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯಂತಹ ಯಾವುದೇ ದಾಖಲಾತಿಗಳು ಇರಲಿಲ್ಲ. ಹೀಗಾಗಿ ಸರ್ಕಾರದ ಯಾವುದೇ ಸೌಲಭ್ಯಗಳು, ಮಾಸಾಶನ ಇವರಿಗೆ ಸಿಗುತ್ತಿರಲಿಲ್ಲ. 2023ರಲ್ಲಿ ಮಾಧ್ಯಮಗಳ ವರದಿ ಮೂಲಕ ಈ ವಿಷಯ ಬೆಳಕಿಗೆ ಬಂದ ತಕ್ಷಣ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ, ಶಾಸಕ ಗೋಪಾಲಕೃಷ್ಣ ಬೇಳೂರು, ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಶಾಸಕರ ನೇತೃತ್ವದ ತಂಡ, ಈ ಕುಟುಂಬಕ್ಕೆ ಅಗತ್ಯ ದಾಖಲಾತಿಗಳನ್ನು ಮಾಡಿಸಿ, ಮಾಸಾಶನ ಬರುವಂತೆ ವ್ಯವಸ್ಥೆ ಮಾಡಿತು.

ಮನೆ ನಿರ್ಮಾಣಕ್ಕಾಗಿ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರನ್ನೊಳಗೊಂಡ ‘ಆಸರೆ ಸಮಿತಿ’ಯನ್ನು ರಚಿಸಲಾಯಿತು. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮೊದಲ ದಾನಿಯಾಗಿ ಸ್ವತಃ 50,000 ರೂ.ಗಳನ್ನು ನೀಡಿ ಮನೆಯ ಫೌಂಡೇಶನ್ ಕೆಲಸಕ್ಕೆ ಚಾಲನೆ ನೀಡಿದರು. ಮನೆ ನಿರ್ಮಾಣದ ಹಾದಿಯಲ್ಲಿ ಹಲವು ಹಣಕಾಸಿನ ಅಡೆತಡೆಗಳು ಎದುರಾದರೂ, ಮಾಧ್ಯಮಗಳ ನೆರವು ಹಾಗೂ ದಾನಿಗಳ ಸಹಾಯದಿಂದ ಹಣ ಸಂಗ್ರಹಿಸಿ ಒಟ್ಟು ಸುಮಾರು 6.5 ಲಕ್ಷ ರೂ. ವೆಚ್ಚದಲ್ಲಿ ‘ಆಸರೆ’ ಎಂಬ ಹೆಸರಿನ ಮನೆಯನ್ನು ನಿರ್ಮಿಸಲಾಗಿದೆ.
ಇಂದು ನೂತನ ಮನೆಯ ಗೃಹಪ್ರವೇಶವನ್ನು ಹೋಮ-ಹವನ, ಸತ್ಯನಾರಾಯಣ ಪೂಜೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಅದ್ದೂರಿಯಾಗಿ ನೆರವೇರಿಸಲಾಯಿತು. ವಿಕಲಚೇತನ ಮಗಳನ್ನು ಇಬ್ಬರು ಸೇರಿ ಕೈಹಿಡಿದು ಒಳಗೆ ಕರೆತಂದು ಕೂರಿಸಿದಾಗ, ಆಕೆಯ ಮುಖದಲ್ಲಿ ಮೂಡಿದ ಸಂತೋಷ ಅಲ್ಲಿ ನೆರೆದಿದ್ದವರ ಕಣ್ಮನ ಸೆಳೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಸರೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ ಅವರು, ಈ ಕಾರ್ಯಕ್ಕೆ ಹಣ ಸಂಗ್ರಹಿಸುವಲ್ಲಿ ಮಾಧ್ಯಮದವರ ಪಾತ್ರ ದೊಡ್ಡದಿದೆ ಹಾಗೂ ಬೆನ್ನೆಲುಬಾಗಿ ನಿಂತ ಶಾಸಕರಿಗೆ ಮತ್ತು ಸಹಕರಿಸಿದ ಎಲ್ಲಾ ಗ್ರಾಮಸ್ಥರಿಗೂ ಸಮಿತಿಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಶಾಸಕರ ಪರವಾಗಿ ಭಾಗವಹಿಸಿ ಮಾತನಾಡಿದ ಶಾಸಕರ ಆಪ್ತಸಹಾಯಕ ಸಣ್ಣಕ್ಕಿ ಮಂಜು, ಶಾಸಕರು ರಾಜಕೀಯ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಲ್ಲಿರುವ ಕಾರಣ ಬರಲಾಗಲಿಲ್ಲ, 2023ರಲ್ಲಿ ಕೊಟ್ಟ ಮಾತಿನಂತೆ ಕಷ್ಟದಲ್ಲಿದ್ದ ತಾಯಿ-ಮಗಳಿಗೆ ಎಲ್ಲರ ಸಹಕಾರದಿಂದ ಇಂದು ಆಸರೆಯಾಗಿರುವುದು ತುಂಬಾ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇಂದಿನ ಈ ಗೃಹಪ್ರವೇಶ ಕಾರ್ಯಕ್ರಮದಲ್ಲಿ ದೀಪಿಕಾ, ಚಿದಂಬರ್, ಚಿನ್ನಪ್ಪ ಜಿ.ಆರ್, ಕೃಷ್ಣಮೂರ್ತಿ, ಅವಿನಾಶ್, ಇಂದ್ರೇಶ್, ನಾರಾಯಣಪ್ಪ, ಗ್ರಾಮಸ್ಥರಾದ ಕೆಂಜಿಯಪ್ಪ ರವೀಂದ್ರ, ನಾಗರಾಜ್, ರತ್ನಮ್ಮ, ಕೃಷ್ಣ… ಇನ್ನಿತರ ಊರಿನ ಗಣ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಬರಹ: Chetandas Hosamane









