​ಒಂದು ಹತ್ಯೆ, ಸಾವಿರ ಪ್ರಶ್ನೆಗಳು: ಸಮಾಜದ ಆತ್ಮಾವಲೋಕನಕ್ಕೆ ಊರುಗಡೂರು ಕೊಟ್ಟ ಪಾಠ

Photo of author

By vishwachetana807@gmail.com

​”ಸಾವಿನ ಮನೆಯಲ್ಲೂ ಮನುಷ್ಯತ್ವ ಮೆರೆದ ಗ್ರಾಮಸ್ಥರು: ಕೋಮು ದ್ವೇಷಕ್ಕೆ ಸೆಡ್ಡು ಹೊಡೆದ ಊರುಗಡೂರು”

ಶಿವಮೊಗ್ಗದ ಊರುಗಡೂರಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ ಹತ್ಯೆ!. ಒಂದು ಮಗು, ಇನ್ನೂ ಬದುಕಿನ ಆರಂಭದ ಹಂತದಲ್ಲಿದ್ದ ವಿದ್ಯಾರ್ಥಿ, ಹಿಂಸೆಗೆ ಬಲಿಯಾಗಿದ್ದಾನೆ ಎಂಬುದು ನೋವಿನ ಸಂಗತಿ. ಇದು ಕೇವಲ ಒಂದು ಅಪರಾಧ ಪ್ರಕರಣವಲ್ಲ , ಇದು ನಮ್ಮ ಸಮಾಜದ ಮನಸ್ಥಿತಿಯ ಮೇಲೆ ಬಿದ್ದಿರುವ ಗಂಭೀರ ಕರಿನೆರಳು. ಅವಿವೇಕ, ಉದ್ಧಟತನ ಮತ್ತು ಕಾನೂನಿನ ಭಯದ ಕೊರತೆ—ಇವೆಲ್ಲವೂ ಸೇರಿ ಇಂತಹ ದುರ್ಘಟನೆಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸುತ್ತಿವೆ. ಮಾನವೀಯ ಮೌಲ್ಯಗಳಿಗಿಂತ ಕ್ರೂರತೆ, ಆಕ್ರೋಶ ಮತ್ತು ಅಸಹಿಷ್ಣುತೆ ಮೇಲುಗೈ ಸಾಧಿಸುತ್ತಿರುವುದು ಅತ್ಯಂತ ಆತಂಕಕಾರಿ ಸತ್ಯ.

ಮಾರಿ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದ ಊರಿನಲ್ಲಿ, ಭಯದ ನಿಶ್ಶಬ್ದ ಅಲೆ ಹರಡಿದ ಆ ರಾತ್ರಿ, ಎಲ್ಲರ ಮನಸ್ಸನ್ನೂ ಕಂಪಿಸಿದ ಘಟನೆ ಅದು. ಹಲ್ಲೆ ಮಾಡಿದವರು ಅಪ್ರಾಪ್ತರು ಎಂಬ ಸಂಗತಿ, ಅದರ ಜೊತೆಗೆ ಕೋಮು ಸಂಬಂಧಿತ ಮಾತುಗಳು ಕೇಳಿಬಂದದ್ದು—ಇವುಗಳು ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸುವ ಸಾಧ್ಯತೆ ಹೊಂದಿದ್ದವು. ಆದರೆ ಇಲ್ಲಿ ನಡೆಯಬೇಕಾಗಿದ್ದದ್ದೇ ಬೇರೆ.

ಅಂತಹ ಸಂಕಷ್ಟದ ಹೊತ್ತಿನಲ್ಲಿ ಊರುಗಡೂರು ತನ್ನ ಆತ್ಮಸ್ಥೈರ್ಯವನ್ನು ತೋರಿಸಿತು. ಸಂಕೇತ್ ಮೃತದೇಹದ ಪಂಚನಾಮೆಯ ಸಮಯದಲ್ಲಿ ಊರಿನ ಹಿಂದೂ-ಮುಸ್ಲಿಂ ಬಾಂಧವರು ಒಂದೇ ವೇದಿಕೆಯಲ್ಲಿ ನಿಂತರು. ದುಃಖವನ್ನು ಹಂಚಿಕೊಂಡರು. ಅನುಮಾನಗಳಿಗಿಂತ ಮಾನವೀಯತೆಯನ್ನು ಮೆರೆದರು. ಈ ಘಟನೆಗೆ ಮತೀಯ ಬಣ್ಣ ಅಂಟಿಸಲು ಯತ್ನಿಸಿದವರ ಎದುರು ಊರುಗಡೂರು ಮೌನವಾಗಿ, ಆದರೆ ದೃಢವಾಗಿ ನಿಂತಿತು. ರಾಜಕೀಯ ಲಾಭಕ್ಕಾಗಿ ಮಗುವಿನ ಸಾವನ್ನು ಬಳಸಿಕೊಳ್ಳಲು ಮುಂದಾದಾಗಲೂ, ಸಂಕೇತ್ ಕುಟುಂಬ ಅದಕ್ಕೆ ಅವಕಾಶ ನೀಡಲಿಲ್ಲ. ಅವರ ಆ ನಿರ್ಧಾರವೇ ಸಮಾಜಕ್ಕೆ ದೊಡ್ಡ ಸಂದೇಶವಾಯಿತು.

ಊರುಗಡೂರಿನಲ್ಲಿ ‘ಭಾಯಿ-ಭಾಯಿ’ ಎನ್ನುವ ವಾತಾವರಣ ಹೊಸದಲ್ಲ. ಹಬ್ಬಗಳ ವೇಳೆ ಸೌಹಾರ್ದತೆ ಇಲ್ಲಿ ಸಹಜ. ಹಿಂದೆಯೂ ಈ ಸೌಹಾರ್ದತೆಯನ್ನು ಕದಡಲು ಪ್ರಯತ್ನಗಳು ನಡೆದಿದ್ದರೂ, ಸ್ಥಳೀಯರು ಅದಕ್ಕೆ ತಡೆಯಾಗಿ ನಿಂತಿದ್ದಾರೆ. ಸಂಕೇತ್ ಅಂತ್ಯಸಂಸ್ಕಾರದ ವೇಳೆ ಮುಸ್ಲಿಂ ಮಹಿಳೆಯರು ಕಂಬನಿ ಮಿಡಿದ ದೃಶ್ಯ, ಕೊನೆಯವರೆಗೂ ಮುಸ್ಲಿಂ ಬಾಂಧವರು ಕುಟುಂಬದ ಜೊತೆಗಿದ್ದ ಕ್ಷಣಗಳು—ಇವೆಲ್ಲವೂ ಈ ಊರಿನ ಮಾನವೀಯತೆಯ ಸಾಕ್ಷಿಗಳು. ಒಂದು ಮಗುವಿನ ಸಾವಿನ ಮುಂದೆ ಧರ್ಮ, ಜಾತಿ, ರಾಜಕೀಯ ಎಲ್ಲವೂ ಸೋತ ಕ್ಷಣಗಳು ಅವು.


ಆದರೆ ಈ ಮಾನವೀಯ ದೃಶ್ಯಗಳ ನಡುವೆಯೇ, ನಾವು ಕಠಿಣ ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕು. ಮಕ್ಕಳಲ್ಲಿ ಇಂತಹ ಕ್ರೂರ ಪ್ರವೃತ್ತಿ ಏಕೆ ಬೆಳೆಯುತ್ತಿದೆ? ಮೌಲ್ಯಬೋಧನೆ, ಸಹನೆ, ಸಹಾನುಭೂತಿ ಮತ್ತು ಸಮಾಜದ ಹೊಣೆಗಾರಿಕೆಯ ಅರಿವು ಮೊದಲು ಮನೆಯಲ್ಲಿಯೇ ರೂಪುಗೊಳ್ಳಬೇಕು. ‘ಕುಟುಂಬವೇ ಮೊದಲ ಶಾಲೆ’ ಎಂಬ ಮಾತು ಇಲ್ಲಿ ಮತ್ತೆ ಮತ್ತೆ ನೆನಪಾಗುತ್ತದೆ. ಆದರೆ ಇಂದಿನ ಅನೇಕ ಮನೆಗಳಲ್ಲಿ ಮಕ್ಕಳ ನಡವಳಿಕೆಗಳ ಮೇಲೆ ಸೂಕ್ತ ಗಮನ ಇಲ್ಲದಿರುವುದು, ಭಾವನಾತ್ಮಕ ಶಿಕ್ಷಣಕ್ಕೆ ಅಗತ್ಯವಾದ ಸಮಯ ಮತ್ತು ಸಂವೇದನೆ ಕೊರತೆಯಾಗಿದೆ.

ಶಿಕ್ಷಣ ವ್ಯವಸ್ಥೆಯ ಪಾತ್ರವೂ ಇಲ್ಲಿ ಪ್ರಶ್ನೆಗೆ ಒಳಗಾಗುತ್ತದೆ. ಅಂಕಗಳು, ಪರೀಕ್ಷೆಗಳು, ಪದವಿಗಳ ಹಿಂದೆ ಓಡುವ ಶಿಕ್ಷಣವು ಮಾನವೀಯತೆ, ನೀತಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವಲ್ಲಿ ವಿಫಲವಾಗುತ್ತಿರುವುದು ದುರಂತ. ಶಿಕ್ಷಣವು ಕೇವಲ ಉದ್ಯೋಗಕ್ಕೆ ದಾರಿ ತೋರಿಸುವುದಲ್ಲ; ಅದು ಉತ್ತಮ ನಾಗರಿಕರನ್ನು ರೂಪಿಸುವ ಸಾಧನವಾಗಬೇಕು. ಮಕ್ಕಳಿಗೆ ಗೆಲುವಿಗಿಂತ ಮೌಲ್ಯಗಳ ಮಹತ್ವ ತಿಳಿಯಬೇಕು.

ಸರ್ಕಾರವೂ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಇಂತಹ ಘಟನೆಗಳ ನಂತರ ಹೇಳಿಕೆಗಳು ಮತ್ತು ಭರವಸೆಗಳು ಮಾತ್ರ ಸಾಲದು. ಕಾನೂನು ಜಾರಿಗೆ ಬರುವ ವ್ಯವಸ್ಥೆ ಪರಿಣಾಮಕಾರಿಯಾಗಿದೆಯೇ? ಅಪರಾಧಿಗಳಿಗೆ ತ್ವರಿತ ಮತ್ತು ಕಠಿಣ ಶಿಕ್ಷೆ ದೊರಕುತ್ತಿದೆಯೇ? ಯುವಕರಲ್ಲಿ ಅಪರಾಧ ಪ್ರವೃತ್ತಿ ಹೆಚ್ಚಾಗಲು ಕಾರಣಗಳೇನು?—ಇವೆಲ್ಲವನ್ನೂ ಗಂಭೀರವಾಗಿ ಅಧ್ಯಯನ ಮಾಡಬೇಕಿದೆ.

ಒಟ್ಟಿನಲ್ಲಿ, ಸಂಕೇತ್ ಹತ್ಯೆ ನಮ್ಮೆಲ್ಲರಿಗೂ ಎಚ್ಚರಿಕೆಯ ಘಂಟೆ. ಇದನ್ನು ರಾಜಕೀಯ, ಧರ್ಮ ಅಥವಾ ಕೋಮು ಕಣ್ಣಿನಿಂದ ನೋಡುವ ಬದಲು, ಸಮಾಜವಾಗಿ ನಾವು ಎಲ್ಲಲ್ಲಿ ತಪ್ಪುತ್ತಿದ್ದೇವೆ ಎಂಬುದನ್ನು ಪ್ರಶ್ನಿಸಬೇಕು. ಒಂದು ಮಗುವಿನ ಪ್ರಾಣ ಹರಣವು ನಮ್ಮ ಮೌಲ್ಯಗಳ, ವ್ಯವಸ್ಥೆಗಳ ಮತ್ತು ಸಂವೇದನೆಯ ಮೇಲೆ ಬಂದಿರುವ ದೊಡ್ಡ ಪ್ರಶ್ನಾರ್ಥಕ ಚಿಹ್ನೆ. ಈ ಪಾಠವನ್ನು ನಾವು ಕಲಿಯದಿದ್ದರೆ, ಇಂತಹ  ಮತ್ತೆ ಮತ್ತೆ ಮರುಕಳಿಸುವ ಅಪಾಯ ನಮ್ಮ ಮುಂದೆಯೇ ನಿಂತಿದೆ.

ವಿಶೇಷ ಬರಹ: ರಫ಼ಿ ರಿಪ್ಪನ್ ಪೇಟೆ ಪ್ರದಾನ ಕಾರ್ಯದರ್ಶಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘ

Leave a Comment